ಅವಶ್ಯಕತೆಯೇ ಸಂಶೋಧನೆಗೆ ಪ್ರೇರಣೆ

ದಾವಣಗೆರೆ.ಆ.12; ನಿಸರ್ಗದ ಒಡಲಿನಲ್ಲಿರುವ ಇಂಧನ ಬರಿದಾಗುತ್ತಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಸಿಗದೇ ಪರದಾಡಬೇಕಾಗುತ್ತದೆ. ಜೈವಿಕ ಇಂಧನಗಳು ಮಾತ್ರ ಈ ಕೊರತೆಯನ್ನು ನೀಗಬಲ್ಲವು. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಆಗಬೇಕಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪದ್ಮಾ ಬಸವಂತಪ್ಪ ತಿಳಿಸಿದರು.ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನೀಲಗಳ ಸಚಿವಾಲಯ, ನ್ಯಾಷನಲ್ ಯೂತ್ ಕೋ. ಆಪ್. ಸೊಸ್ಶೆಟಿ ಸಹಯೋಗದೊಂದಿಗೆ ಸಿದ್ದಗಂಗಾ ಶಾಲೆಯಲ್ಲಿ ನಡೆದ ವಿಶ್ವ ಜೈವಿಕ ಇಂದನ ದಿನಾಚರಣೆಯನ್ನು ಹೊಂಗೆ ಸಸಿ ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಜೈವಿಕ ಇಂಧನಗಳ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ಹಾನಿಯೂ ತಗ್ಗುತ್ತದೆ. ಅವಶ್ಯಕತೆಯೇ ಸಂಶೋಧನೆಗೆ ಪ್ರೇರಣೆ ಹಾಗಾಗಿಯೇ ಪರ್ಯಾಯ ಇಂಧನ ಮೂಲಗಳ ಬಗ್ಗೆ ಇತ್ತೀಚೆಗೆ ಹೆಚ್ಚಿನ ಚರ್ಚೆ, ಸಂಶೋಧನೆಗಳು ನಡೆಯುತ್ತಿವೆ ಎಂದರು.ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಡಾ. ದೇವರಾಜು ಮಾತನಾಡಿ ಜೈವಿಕ ಇಂಧನದ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಇದರ ಬಗ್ಗೆ ರೈತರು, ಯುವಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಕಕ್ಕರಗೊಳ್ಳದಲ್ಲಿ ಮಂಜುನಾಥ್ ಎಂಬ ಕೃಷಿಕರು ಸ್ವಯಂ ಪ್ರೇರಣೆಯಿಂದ ಜೈವಿಕ ಇಂಧನವನ್ನು ತಯಾರಿಸಿ ತಮ್ಮ ವಾಹನಗಳಿಗೆ ಬಳಸುತ್ತ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತವರಿಗೆ ಉತ್ತೇಜನ ಸಿಕ್ಕರೆ ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲೂ ಬಯೋ ಡೀಸೆಲ್ ಬಂಕ್ ಆರಂಭವಾಗುವ ದಿನಗಳು ದೂರವಿಲ್ಲ ಎಂದರು. ಸಿದ್ದಗಂಗಾ ಶಾಲೆಯ ಮುಖ್ಯೋಪಾಧ್ಯಾಯಿನಿ ಜಸ್ಟಿನ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ, ಹಿಂದೂಸ್ತಾನ್ ಪೆಟ್ರೋಲಿಯಂನ ಡಿ. ಸತೀಶ್‍ಕುಮಾರ್, ಇಂಡಿಯನ್ ಆಯಿಲ್‍ನ ಪೂರ್ಣಚಂದ್ರರಾವ್. ಎಂ. ಮಾತನಾಡಿದರು. ಪರಿಸರ ವೇದಿಕೆಯ ಪ್ರಸನ್ನ ಬೆಳಕೆರೆ, ಕೊಟ್ರೇಶ್‍ಗೌಡ, ಸೆಟ್‍ಡೆಮ್ಸ್ ಸಂಸ್ಥೆಯ ಯು. ಕೆ. ಉಗ್ರಪ್ಪ, ಮಂಜುನಾಥ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.ವಿಶ್ವ ಜೈವಿಕ ಇಂದನ ದಿನಾಚರಣೆಯ ಅಂಗವಾಗಿ ನಡೆದ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಲಾವಿದೆ ಎನ್. ಬಿ. ಲೀಲಾ ಪರಿಸರ ಗೀತೆ ಹಾಡಿದರು. ಗಿರೀಶ್ ದೇವರಮನೆ ಸ್ವಾಗತಿಸಿದರು. ದೊಗ್ಗಳ್ಳಿಗೌಡ್ರು ಪುಟ್ಟರಾಜು ವಂದಿಸಿದರು. ಆರ್. ಬಿ. ಹನುಮಂತಪ್ಪ ನಿರೂಪಿಸಿದರು.

Leave a Comment