ಅಲ್ಲಮನ ಧೈರ್ಯ ಇನ್ಮೇಲೆ ಇರೋದಿಲ್ಲ…

  ಅಲ್ಲಮನನ್ನು ದೃಶ್ಯವಾಗಿಸಿ ಸಿನೆಮಾ ಮಾಡುವಾಗ ಮತ್ತು ಸಿನೆಮಾವನ್ನು ಬಿಡುಗಡೆ ಮಾಡುವಾಗ ಎಂಥಾ ಶ್ರಮ ಇದೆ ಎನ್ನುವ ಕಲ್ಪನೆ ಯಾರಿಗಾದರೂ ಇದ್ದರೆ ಅಲ್ಲಮ ಚಿತ್ರದ ಬಗ್ಗೆ ಎದ್ದಿರುವ ವಿರೋಧಗಳು ಇರುವುದಿಲ್ಲ ಎನ್ನುತ್ತಾರೆ ಖ್ಯಾತ ನಿರ್ದೇಶಕ ನಾಗಾಭರಣ. ಪೂರ್ಣಪ್ರಮಾಣದಲ್ಲಿ ಅಲ್ಲಮ ಸಿನೆಮಾವನ್ನು ಮೊದಲು ನೋಡಿ ಎನ್ನುವುದು ಅವರ ಮನವಿ. ಸಿನೆಮಾ ನೋಡಿದಾಗ ಇಷ್ಟವಾಗದಿದ್ದರೆ  ಸಂವಾದಕ್ಕೆ ಕರೆದು ಯಾಕೆ ಹೀಗೆ ಮಾಡಿದ್ದೀರ? ಎಂದು ಪ್ರಶ್ನಿಸಿ, ಚರ್ಚಿಸೋಣ ಆಗ ಇನ್ನೊಂದು ಅದ್ಭುತ ಅಲ್ಲಮನನ್ನು ತರುವುದಕ್ಕೆ ಸಾಧ್ಯವಾಗುತ್ತದೆ ಎಂದಾದರೆ ಸೃಜನಶೀಲತೆಗೆ ಸೃಜನಶೀಲತೆಯನ್ನು ಉತ್ತರವಾಗಿ ಕೊಡೋಣ ಎನ್ನುತ್ತಾರೆ ನಾಗಾಭರಣ.

* ಅಲ್ಲಮ ಚಿತ್ರ ಬಿಡುಗಡೆಯಾಗುವಾಗ ವಿರೋಧಗಳು  ವ್ಯಕ್ತವಾಗುತ್ತಿರುವುದು ಏನೆನಿಸುತ್ತದೆ?
ವಿರೋಧಿಸುವವರಿಗೆ ರಿಸ್ಕ್ ಬಹಳಾ ಕಡಿಮೆ. ಇಂಥ ವಿರೋಧಕ್ಕೆ ವೇದಿಕೆ ಕಲ್ಪಿಸಿಕೊಟ್ಟಷ್ಟೂ ಪ್ರತಿಯೊಬ್ಬರಿಗೂ ಸಿನೆಮಾ ಮೊದಲ ಟಾರ್ಗೆಟ್ ಆಗಿಬಿಡುತ್ತದೆ. ಏಕಾಏಕಿ ಪ್ರಚಾರಕ್ಕೆ ಬರಲು ಮತ್ತು ಇನ್ನೊಬ್ಬರ ಯಶಸ್ಸಿನ ಮೇಲೆ ಸವಾರಿ ಮಾಡುವುದಕ್ಕೆ ಈ ತರಹದ ವಿರೋಧಗಳು ಜಾಸ್ತಿಯಾಗುತ್ತಿದೆ. ವಿರೋಧ ಪ್ರಾಮಾಣಿಕವಾಗಿದ್ದರೆ ಸಿನೆಮಾ ನೋಡಬೇಕಲ್ವಾ? ಸಿನೆಮಾ ನೋಡಿ ತಾರ್ಕಿಕವಾಗಿ ಇದಕ್ಕಿಂತಲೂ ಅದ್ಭುತವಾದ ಇನ್ನೊಂದು ಸಿನೆಮಾ ಮಾಡಿ ಅದರ ಮೂಲಕ ಅವರನ್ನು ಅವರು ಜಸ್ಟಿಫೈ ಮಾಡಿಕೊಳ್ಳಬೇಕು. ಸೃಜನಶೀಲತೆಗೆ ಸೃಜನಶೀಲತೆಯೇ ಸವಾಲಾಗಬೇಕಲ್ವಾ? ಸೃಜನಶೀಲತೆ ರಾಜಕೀಯ ಅಥವಾ ಧರ್ಮ ಸವಾಲಾಗಬಾರದು.

* ಅಲ್ಲಮ ಚಿತ್ರ ಚಿತ್ರೋತ್ಸವದಲ್ಲಿ ಪ್ರದರ್ಶನವಾದಾಗ ವಿರೋಧ ವ್ಯಕ್ತವಾಗಲಿಲ್ಲ ಅಲ್ವಾ?
ಅಲ್ಲಿ ಯಾರೂ ವಿರೋಧಿಸಲಿಲ್ಲ ಆಗಲೇ ಈಗ ವಿರೋಧಿಸುವವರು ಬಂದು ಚಿತ್ರವನ್ನು ನೋಡಬಹುದಿತ್ತು ಅಥವಾ ಯಾರನ್ನಾದರು ಕಳಿಸಬಹುದಿತ್ತು. ಅದು ಹೋಗಲಿ, ಅಲ್ಲೆಲ್ಲೋ ಹೋಗಿ ಪ್ರತಿಭಟಿಸುವುದಕ್ಕಿಂತ ಸಂಬಂಧಪಟ್ಟವರು ನಮಗೆ ಸಿನೆಮಾ ತೋರಿಸಿ ಎಂದು ಕೇಳಬಹುದಿತ್ತು. ಅದು ಸೌಹಾರ್ಧಯುತವಾಗಿ ಮಾಡುವಂಥ ಕೆಲಸ.  ಮೂವತ್ತು ವರ್ಷಗಳಲ್ಲಿ ಮೂವತ್ತೈದು ಸಿನೆಮಾ ಏನ್ ಮಾಡಿದ್ದೇನೊ ಯಾವತ್ತೂ ಯಾರನ್ನೂ ನೋಯಿಸಿಲ್ಲ, ನೋಯಿಸುವುದೂ ಇಲ್ಲ. ಅದೆಲ್ಲವನ್ನೂ ಗಣನೆಗೆ ತಂದುಕೊಂಡಾಗ ಈ  ತರಹದ ಅನ್‌ಕ್ರಿಯೇಟೀವ್ ಜನ ತೊಂದರೆ ಕೊಟ್ಟಾಗ ಅಲ್ಲಮ ತರಹದ ಸಿನೆಮಾನ ಮಾಡೋದೇ ಬೇಡ್ವಾ? ಅನ್ನೋಂತಹ ಅನುಮಾನಗಳು ಬರುತ್ತೆ. ರೌಡಿಗಳ ಬಗ್ಗೆ ಸಿನೆಮಾ ಮಾಡೋದೇ ಒಳ್ಳೆದೇನೋ ಅನ್ಸುತ್ತೆ. ಆಗ ಯಾರು ಪ್ರಶ್ನೇಯೇ ಮಾಡೋದಿಲ್ಲ ಅಲ್ವಾ?

* ನಿರಾಕಾರಿಯಾದ ಅಲ್ಲಮ ನಿಮ್ಮ ಚಿತ್ರದಲ್ಲಿ ಹೇಗೆ ಬಿಂಬಿತವಾಗಿದ್ದಾರೆ?
ನಿರಾಕಾರವನ್ನು ಹಿಡಿದಿಡೊದು ಇದೆಯಲ್ಲಾ? ಅಮೂರ್ತವನ್ನು ಮೂರ್ತವಾಗಿಸುವುದಿದೆಯಲ್ಲಾ? ಅದು ಯಾವಾಲೂ ಚಾಲೇಂಜಿಂಗ್. ಅದರಲ್ಲೂ ವಿಶೇಷವಾಗಿ ಸಿನೆಮಾದಂಥ ಮಾಧ್ಯಮದಲ್ಲಿ ರಕ್ತ-ಮಾಂಸ ಕಾಣ್ತಾ ಇರುತ್ತೆ. ಇಡೀ ಸಿನೆಮಾ ನಿಮ್ಮನ್ನು ಆವರಿಸಿಕೊಂಡಾಗ ಆ ನಿರಾಕಾರದ ಭಾವಾ ತಾನೇತಾನಾಗಿ ಬರುತ್ತೆ. ಅಲ್ಲಮ ಏನು? ಆ ವ್ಯಕ್ತಿತ್ವ ಏನು? ಅನ್ನೋದು ಗೊತ್ತಾಗುತ್ತೆ. ಆ ನಿರಾಕಾರ ಭಾವವನ್ನು ಭಾವನಾತ್ಮಕವಾಗಿ ತರಲು ಸಾದ್ಯವಾ? ದೃಶ್ಯವಾಗಿ ತರಲು ಸಾಧ್ಯನಾ? ಎನ್ನುವಂತಹದ್ದು ಹೀಗಾಗಿ ಈ ಎರಡೂ ಸಾಧ್ಯತೆಗಳನ್ನು ಗುರುತಿಸಿಕೊಂಡು ಸಿನೆಮಾ ನಡೆಯುತ್ತದೆ.

* ಮೂರು ವರ್ಷಗಳ ನಿಮ್ಮ ಶ್ರಮದ ಅಲ್ಲಮ ಪ್ರೇಕ್ಷಕರಿಗೆ ಹೇಗೆ ಅರ್ಥವಾಗಬಹದು ಮತ್ತು ಇಷ್ಟವಾಗಬಹುದು?
ನನ್ನ ಪ್ರಕಾರ ಕನ್ನಡದ ಮನಸುಗಳು ಬಹಳ ಭದ್ರವಾಗಿ ಮತ್ತು ಪ್ರೋತ್ಸಾಹದಾಯಕವಾಗಿ ಅಲ್ಲಮನನ್ನು ತೆಗೆದುಕೊಳ್ಳುತ್ತವೆ ಎನ್ನುವ ಭರವಸೆ ಇದೆ. ಧಾರಾವಾಡದಲ್ಲಿ ಇತ್ತೀಚೆಗೆ ಅಲ್ಲಮ ಚಿತ್ರ ಪ್ರದರ್ಶನ ನಡೆದಾಗ ಬಹಳ ಜನ ಸಾಹಿತಿಗಳು ನೋಡಿದ್ರು ಅವ್ರಲ್ಲಿ ಒಬ್ಬೊಬ್ಬರು ಒಬ್ಬೊಬ್ಬ ಅಲ್ಲಮನನ್ನು ಕಂಡಿದ್ದವರು ಅಂದರೆ ಅವ್ರ ಗ್ರಹಿಕೆಗೆ ಬಂದಂತಹ ಅಲ್ಲಮರು ಸಾಕಷ್ಟಿದ್ದರು. ಇಡೀ ಸಿನೆಮಾ ನೋಡಿದ್ಮೇಲೆ ಅವ್ರೆಲ್ಲಾ ಹೇಳಿದ್ದು ನಮ್ಮ ಗ್ರಹಿಕೆಗೆ ಹೊಂದಿಕೊಳ್ಳುವ, ಸರಿದೂಗಿಸುವ ಮತ್ತು ಮೀರಿಸುವ ಕೆಲಸವನ್ನು ನೀವು ಮಾಡಿದ್ದೀರಿ ಎನ್ನುವುದಾಗಿತ್ತು. ಅಷ್ಟರಮಟ್ಟಿಗೆ ಅಲ್ಲಮನ ಬಗ್ಗೆ ಈಗಾಗಲೇ ಪ್ರಚಲಿತದಲ್ಲಿರುವ ಮತ್ತು ಯೋಚನಾ ಲಹರಿಗೆ ತೊಂದರೆಯಾಗದ ಹಾಗೆ ಇನ್ನೂ ಹೆಚ್ಚಿನ ಪ್ರಭೇದಕ್ಕೆ ತೆಗೆದುಕೊಂಡು ಹೋಗುವ ಹಾಗೆ ಈ ಸಿನೆಮಾ ಇದೆ ಎನ್ನುವಂಥ ಮಾತುಗಳು ಅಲ್ಲಿ ಬಂತು.

* ಅಲ್ಲಮ ಚಿತ್ರದ ಟೀಜರ್‌ನಲ್ಲಿರುವ ಅಲ್ಲಮ ಮತ್ತು ಮಾಯೆಯ ಪ್ರೇಮ ದೃಶ್ಯಗಳು ಪ್ರಚಲಿತವಿರುವ ಅಲ್ಲಮನ ಕಲ್ಪನೆಗೆ ವಿರುಧ್ಧವಾಗಿಲ್ವಾ?
ಟೀಜರ್‌ನೇ ಇಡೀ ಸಿನೆಮಾ ಅಂದ್ಕೊಬಾರ್‍ದು ಒಟ್ಟಾರೆ ಸಿನೆಮಾ ನೋಡಿ ಹೇಳಿ…
* ನಿಮ್ಮ ನಾಗಮಂಡಲ ಚಿತ್ರ ತರೆಗೆ ಬಂದ ಕಾಲಘಟ್ಟಕ್ಕೂ ಅಲ್ಲಮ ತೆರೆಕಾಣುತ್ತಿರುವ ಪ್ರಸ್ತುತಕ್ಕೂ ಆಗಿರುವ ಬದಲಾವಣೆ ಆರೋಗ್ಯಕರವಾಗಿದೆಯಾ?
ಖಂಡಿತಾ ಆರೋಗ್ಯಕರ ಅಲ್ಲ. ಸಿನೆಮಾವನ್ನು ಸಿನೆಮಾವಾಗಿಯೇ ವೀಕ್ಷಿಸಬೇಕೇ ಹೊರತು ರಾಜಕೀಯ, ಧರ್ಮ, ಸಂಪ್ರದಾಯ ಈ ಎಲ್ಲವನ್ನೂ ಅದರ ಮೇಲೆ ಹೇರಬಾರದು. ಅಭಿವ್ಯಕ್ತಿ ಸ್ವಾತಂತ್ಯ ಅನ್ನೋದು ಇದೆಯಲ್ವಾ? ಸೆನ್ಸಾರ್‌ನಿಂದ ಸಿನೆಮಾ ಕ್ಲಿಯರ್ ಆದ್ಮೇಲೆ ಜನರು ಸಿನೆಮಾಗಳನ್ನು ನೋಡ್ತಾ ಹೋಗ್ಬೇಕು. ಪ್ರತಿಯೊಂದಕ್ಕೂ ಟೀಕೆಗಳು, ವಿರೋಧ ಬರ್‍ತಾ ಹೋದ್ರೆ, ಅಂದ್ರೆ ಈ ಸಿನೆಮಾದಿಂದ ತಮಗೇನು ಲಾಭವಾಗಬಹುದೆನ್ನುವ ಯೋಚನೆಯಿಂದ ಸಿನೆಮಾಗಳಿಗೆ ವಿರೋಧ ಮಾಡ್ತಾ ಹೋಗುವುದರಿಂದ ಏನನ್ನು ಸಾಧಿಸುತ್ತಿದ್ದೇವೆ ಅನ್ನೋ ಆತ್ಮಾವಲೋಕನ ಮಾಡಿಕೊಳ್ಳಬೇಕು.

* ವಿರೋಧಗಳು ವ್ಯಕ್ತವಾಗುವುದರಿಂದ ನಿಮಗೆ ಹೊಸ ಚಿತ್ರ ನಿರ್ದೇಶನಕ್ಕೆ ಕಷ್ಟವಾಗುತ್ತಾ?
ಇನ್ಮೇಲೆ ನಾನು ಯಾವ ಶರಣರನ್ನೂ ಮುಟ್ಟೋದೇ ಇಲ್ಲ. ನನ್ಗೆ ಬಹಳ ದೊಡ್ಡ ಕನಸಿತ್ತು ಅಲ್ಲಮನನ್ನು ಓದ್ತಾ ಓದ್ತಾ ಅಘಾದವಾದ ಸಮುದ್ರದೊಳಗೆ ಇಳಿದುಬಿಟ್ಟಿದ್ದೆ. ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಪ್ರತಿಯೊಂದು  ವ್ಯಕ್ತಿತ್ವಗಳು ಅದ್ಭುತವಾದ ವ್ಯಕ್ತಿತ್ವಗಳು, ಅವ್ರಲ್ಲಿ ಅದ್ಭುತವಾದ ಶಕ್ತಿಯನ್ನು ಕಂಡಿದ್ದೆ. ಅವ್ರೆಲ್ಲರ ಬಗ್ಗೆನೂ ಒಂದೊಂದಾಗಿ ಸಿನೆಮಾ ಮಾಡಿಕೊಂಡು ಹೋಗಿದ್ದರೂ ನಾಲ್ಕೈದು ಸಿನೆಮಾಗಳನ್ನು ಸುಲಭವಾಗಿ ಮಾಡಬಹುದಿತ್ತು ನಾನು.

ಈಗೇನನ್ಸುತ್ತೆ ಅಂದ್ರೆ ಬೇಕಾಗಿಲ್ಲ ಅದರಬದಲು ಬೇರೆ ಸಿನೆಮಾಗಳನ್ನು ಮಾಡೋಕು ನನ್ಗೆ ಬರೋದರಿಂದ ಪ್ರಾಯ ಪ್ರಾಯ ತರಹದ್ದೋ ಇನ್ನೊಂದೇನೋ ಮಾಡ್ತೀನಿ. ಜೀವನ ಮಾಡೋಕೆ ಏನ್ ಬೇಕಾದ್ರೂ ಮಾಡಬಹುದು ಆದರೆ ಒಂದು ಆದರ್ಶ ಇತ್ತಲ್ಲ ಆ ಆದರ್ಶಕ್ಕೆ ಅಲ್ಲಮನಿಗೆ ಮಾಡಿರುವ ವಿರೋಧ ತೊಡಕಾಯ್ತು ಇನ್ಮೇಲೆ ಆ ಧೈರ್ಯ ಇರೋದಿಲ್ಲ.
-ಕೆ.ಬಿ. ಪಂಕಜ

Leave a Comment