ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ

ಹನೂರು: ಜೂ.13- ಮನುಷ್ಯ ಪ್ರಕೃತಿಯನ್ನು ವಿಕೃತವಾಗಿ ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದಾನೆ ಎಂದು ಇಸ್ರೋ ವಿಜ್ಞಾನಿ ಜಗನಾಥನ್ ವೆಂಕಟರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ಇಂದು ಬೆಳಿಗ್ಗೆ ಹನೂರು ಪಟ್ಟಣದ ಕ್ರಿಸ್ತರಾಜ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾನವನ ಸ್ವಯಚ್ಛ ತನದಿಂದ ಪ್ರಕೃತಿಯಲ್ಲಿ ಏರುಪೇರು ಉಂಟಾಗಿ ಅನೇಕ ರೀತಿಯ ಪ್ರಾಕೃತಿಕ ಅಪಾಯಗಳು ಎದುರಾಗುತ್ತಿವೆ. ಮುಂದಿನ ದಿನಗಳಲ್ಲಾದರು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಮನಹರಿಸಬೇಕಾಗಿದೆ ಎಂದ ಅವರು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ವಾತಾವರಣ ಇದೆ. ಉತ್ತಮ ಗಾಳಿ ಸಿಗುತ್ತಿದೆ. ಗ್ರಾಮೀಣ ಭಾಗದ ಜನತೆಯೇ ಪುಣ್ಯವಂತರು. ಪ್ಲಾಸ್ಟಿಕ್ ಬಳಕೆ ಇರಲಿ ಆದರೆ ದುರ್ಭಳಕೆ ಸಲ್ಲದು. ಇಂದಿನ ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಪ್ಲಾಸ್ಟಿಕ್ ತ್ಯಜಿಸುವ ನಿಟ್ಟಿನಲ್ಲಿ ಹಾಗೂ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವಲ್ಲಿ ಗಮನಹರಿಸಬೇಕು ಎಂದು ತಮ್ಮದೇ ದಾಟಿಯಲ್ಲಿ ಉದಾಹರಣೆಗಳ ಮೂಲಕ ತಿಳಿಸಿದರು. ಬಿಡಿ ಸಿಗರೇಟು ಸೇದಿ ಆದರೆ ಹೊಗೆ ಬಿಡಬೇಡಿ ಎಂಬ ಹಾಸ್ಯ ಚಟಾಕಿಯನ್ನು ಹಾರಿಸಿದ ಅವರು ಮಾರ್ಮಿಕವಾಗಿ ವಾಯು ಮಾಲಿನ್ಯ ಹಾಗೂ ಮಾನವನ ಆರೋಗ್ಯವನ್ನು ಕಾಪಾಡಬೇಕೆಂದು ತಿಳಿ ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಪರಿಸರವನ್ನು ಉಳಿಸಿ ಬೆಳೆಸುವ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ. ಗಮನ ಸೆಳೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ:
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯಿಂದ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಪರಿಸರ ಸಂಬಂಧಿತ ಗೀತೆಗಳಿಗೆ ಹಸಿರು ಬಣ್ಣದ ಉಡುಗೆತೊಡುಗೆಗಳನ್ನುಟ್ಟು ನೃತ್ಯವನ್ನು ಮಾಡುವ ಮೂಲಕ ಗಮನ ಸೆಳೆದರು. ವೇದಿಕೆ ಸೇರಿದಂತೆ ಶಾಲಾ ಆವರಣದಲ್ಲಿ ಪರಿಸರ ಜಾಗೃತಿ ಮೂಡಿಸುವ ಬಿತ್ತಿ ಪತ್ರಗಳನ್ನು ಆಳವಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪರಿಸರ ತಜ್ಞರು ಹಾಗೂ ಕ್ರೈಸ್ತ ಧರ್ಮಗುರುಗಳಾದ ಜಾನ್‍ಟೆಕ್ಷೇರಾ, ಶಿಕ್ಷಣ ತಜ್ಞ ಫಾದರ್ ಕೊಲೋಸೊ, ಮಾರ್ಟಳ್ಳಿ ಪ್ರಾಂಶುಪಾಲ ಫಾದರ್ ಕ್ರಿಸ್ಟೋಪರ್, ಫಾದರ್ ಜಾಯ್, ಕ್ರಿಸ್ತರಾಜ ಶಾಲೆಯ ವ್ಯವಸ್ಥಾಪಕರಾದ ಫಾದರ್ ರೊನಾಲ್ಡ್ ಧಾಂತಿ, ಕಾಲೇಜು ಪ್ರಾಂಶುಪಾಲ ಸಿಸ್ಟರ್ ಶಾಂತಿ, ಪ್ರೈಮರಿ ಮುಖ್ಯ ಶಿಕ್ಷಕರಾದ ಸಿಸ್ಟರ್ ವೀಣಾ, ಜಸಿಂತ, ಆರ್.ಎಫ್.ಒ ನಂದಗೋಪಾಲ್, ಪ.ಪಂ.ಸದಸ್ಯ ಸೋಮಶೇಖರ್ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

Leave a Comment