ಅರುಣ್ ಜೇಟ್ಲಿ ವಿರುದ್ಧದ ಪಿಐಎಲ್ ರದ್ದುಪಡಿಸಿದ ಸುಪ್ರೀಂಕೋರ್ಟ್

ನವದೆಹಲಿ, ಡಿ. ೭- ಭಾರತೀಯ ರಿಸರ್ವ್ ಬ್ಯಾಂಕ್‌ನ ಆರ್‌ಬಿಐನ ಮೀಸಲು ಹಣಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮಾಡಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸುಪ್ರೀಂಕೋರ್ಟ್ ಇಂದು ವಜಾ ಮಾಡಿದೆ.
ಇದು ಮಾತ್ರವಲ್ಲದೆ ಪಿಐಎಲ್ ಸಲ್ಲಿಸಿದ್ದ ವಕೀಲ ಎಂ.ಎಲ್. ಶರ್ಮ ಅವರಿಗೆ ನ್ಯಾಯಾಲಯ ೫೦,೦೦೦ ರೂ. ದಂಡವನ್ನೂ ವಿಧಿಸಿದೆ.
ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರನ್ನೊಳಗೊಂಡ ನ್ಯಾಯಪೀಠ ‘ಈ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲು ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ‘ ಎಂದು ಹೇಳಿದೆ.
‘ಹಣಕಾಸು ಸಚಿವರು ಆರ್‌ಬಿಐನ ಮೀಸಲು ನಿಧಿಯನ್ನು ಲೂಟಿ ಮಾಡಿದ್ದಾರೆ‘ ಎಂದು ಶರ್ಮ ಆರೋಪಿಸಿದ್ದರು.
ಶರ್ಮ ೫೦,೦೦೦ ರೂ. ದಂಡ ಪಾವತಿಸುವವರೆಗೆ ಅವರಿಗೆ ಯಾವುದೇ ಪಿಐಎಲ್ ಸಲ್ಲಿಸಲು ಅವಕಾಶ ನೀಡದಂತೆ ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ನ್ಯಾಯಪೀಠ ಆದೇಶಿಸಿತು. ಪಿಐಎಲ್ ವಜಾ ಆದ ನಂತರವೂ ತಮ್ಮ ವಾದವನ್ನು ಶರ್ಮ ಮುಂದುವರೆಸಲು ಕಾರಣ ನ್ಯಾಯಪೀಠ ಅವರಿಗೆ ದಂಡ ವಿಧಿಸಿತು. ನ್ಯಾಯಾಲಯಕ್ಕೆ ತೃಪ್ತಿ ಪಡಿಸಲು ಸಾಧ್ಯವಾಗದೇ ಹೋದಲ್ಲಿ ದಂಡ ವಿಧಿಸಬೇಕಾಗುತ್ತದೆ ಎಂದು ಸಿ.ಜಿ. ಶರ್ಮ ಅವರಿಗೆ ಎಚ್ಚರಿಕೆ ನೀಡಿದ್ದರು. ಹಣಕಾಸು ಸಚಿವರ ಮೇಲೆ ನೇರ ಆರೋಪ ಮಾಡಿದ್ದರ ಬಗ್ಗೆ ನ್ಯಾಯಪೀಠ ಅಸಂತೋಷ ವ್ಯಕ್ತಪಡಿಸಿತು.
‘ಈ ಪಿಐಎಲ್ ಏನು? ಇಂಥ ದುಸ್ಸಾಹಸಗಳನ್ನು ನೀವು ಮಾಡಬಾರದು, ನಿಖರವಾಗಿ ಇದೇನು? ಆರ್‌ಬಿಐ ಮೀಸಲು ನಿಧಿಯನ್ನು ಹಣಕಾಸು ಸಚಿವರು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ, ಇದು ನ್ಯಾಯಾಲಯಕ್ಕೆ ಗೌರವ ತರುವಂಥಾದ್ದಲ್ಲ, ಈ ಪಿಐಎಲ್ ಮುಂದುವರೆಸಲು ನಿಮಗೆ ನಾವು ಏಕೆ ಅವಕಾಶ ನೀಡಬೇಕು?‘ ಎಂದು ನ್ಯಾಯಪೀಠ ಪ್ರಶ್ನಿಸಿತ್ತು.

Leave a Comment