ಅರಿವಿನ ಜೊತೆ ಆಚಾರವಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯ ದಾವಣಗೆರೆಯಲ್ಲಿ ಮತ್ತೆ ಕಲ್ಯಾಣ

ದಾವಣಗೆರೆ, ಆ. 22; ನಮ್ಮ ಯುವ ಪೀಳಿಗೆ ದಿಕ್ಕು ತಪ್ಪುತ್ತಿದೆ. ಅದಕ್ಕೆ ಕಾರಣ ಸರಿಯಾದ ಮಾರ್ಗದರ್ಶನವಿಲ್ಲದಿರುವುದು. ಆಧುನಿಕ ತಂತ್ರಜ್ಞಾನ ಅವರನ್ನು ಮತ್ತೆಲ್ಲೋ ಕರೆದೊಯ್ಯುತ್ತಿರುವುದು ದುರಂತ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಸಹಮತ ವೇದಿಕೆ ವತಿಯಿಂದ ನಗರದ ಹದಡಿ ರಸ್ತೆಯಲ್ಲಿರುವ ಎಸ್ ಎಸ್ ಕಲ್ಯಾಣ ಮಂದಿರದಲ್ಲಿಂದು ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಮಕ್ಕಳ ಜೊತೆಗೆ ಸಂವಾದ ಮಾಡುವುದು ಮುಖ್ಯ. ನಾಡನ್ನು ಕಟ್ಟಬೇಕಾದವರು ನಮ್ಮ ಯುವಪೀಳಿಗೆ. ಇಂದಿನ ಯುವಪೀಳಿಗೆ ದಿಕ್ಕು ತಪ್ಪುತ್ತಿದೆ. ಅವರಿಗೆ ಸರಿಯಾದ ಮಾರ್ಗದರ್ಶನವಿಲ್ಲ, ಆಧುನಿಕ ತಂತ್ರಜ್ಞಾನ ಅವರನ್ನು ಎತ್ತೆತ್ತಲೋ ಕರೆದೊಯ್ಯುತ್ತಿದೆ. ಹಿರಿಯರು, ಕಿರಿಯರು, ಶಾಲಾಕಾಲೇಜುಗಳಲ್ಲೂ ಸಹ ತಿದ್ದುವ ಕಾರ್ಯ ನಡೆಯುತ್ತಿಲ್ಲ, ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಪ್ರಯತ್ನ ಯಾರು ಮಾಡುತ್ತಿಲ್ಲ, ವಿದ್ಯಾರ್ಥಿಗಳು ಸಭ್ಯರಿದ್ದಾರೆ. ಸಾಧನೆಯ ತುಡಿತ ಅವರಲ್ಲಿದೆ. ಸಂಕಲ್ಪವಿದೆ. ಅದಕ್ಕೆ ಪ್ರೇರಣೆ, ಪ್ರೋತ್ಸಾಹ ನೀಡಬೇಕು. ಅದಕ್ಕಾಗಿ ವಿದ್ಯಾರ್ಥಿಗಳೊಂದಿ ಸಂವಾದ ಮಾಡಲಾಗುತ್ತಿದೆ. ಇಂದಿನ ಶಿಕ್ಷಣ ಎಲ್ಲರಿಗೂ ಬೇಕಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶಿಕ್ಷಣ ನಮ್ಮನ್ನು ಶರಣರನ್ನಾಗಿ ಮಾಡುತ್ತದೆಯೇ ನಮ್ಮ ವ್ಯಕ್ತಿತ್ವವನ್ನು ವಿಕಾಸ ಮಾಡುತ್ತಿದೆ ಎಂಬ ಪ್ರಶ್ನೆ ಹಾಕಿಕೊಂಡರೆ ನಮ್ಮ ಆಧುನಿಕ ಶಿಕ್ಷಣ ನಮ್ಮನ್ನು ಮತ್ತೊಂದು ಅರ್ಥದಲ್ಲಿ ದಿಕ್ಕುತಪ್ಪಿಸುತ್ತಿದೆ. ಭ್ರಷ್ಟಾಚಾರ, ದುರಾಚಾರ ನಡೆಯುತ್ತಿರುವುದು ಅವಿದ್ಯಾವಂತರಿಂದಲ್ಲ, ಹೆಚ್ಚು ಅಧ್ಯಯನಶೀಲರಾದ, ಉನ್ನತ ಸ್ಥಾನದಲ್ಲಿರುವ ಜನರಿಂದ. ಕಾರಣ ಅವರಿಗೆ ಶಿಕ್ಷಣ ಸಿಕ್ಕಿದೆ ಆದರೆ ಸಂಸ್ಕಾರ ಸಿಗಲಿಲ್ಲ, ಶಿಕ್ಷಣ ಎಷ್ಟು ಮುಖ್ಯವೋ, ಸಂಸ್ಕಾರವು ಬೇಕು. ಸಂಸ್ಕಾರ ಹೀನ ಶಿಕ್ಷಣದಿಂದ ಸಮಾಜ ಆಳವಾದ ಗುಂಡಿಗೆ ಬೀಳುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿರಿಸಿಕೊಂಡು ಶರಣರು ನಿಜವಾದ ಶಿಕ್ಷಣ ನೀಡಿದ್ದರು. ಓದುವುದು ಕಿವಿ ಊದಲು ಅಲ್ಲ,  ಇನ್ನೊಬ್ಬರನ್ನು ಹಾಳು ಮಾಡಲೂ ಅಲ್ಲ, ಬದಲಾಗಿ ನಾನು ಬೆಳೆದು ಇನ್ನೊಬ್ಬರನ್ನು ಬೆಳಸಲು. ಚೈತನ್ಯ ಪಡೆಯುವುದು ಶಿಕ್ಷಣ. ಕ್ರಿಯೆ ಜ್ಞಾನ. ಜ್ಞಾನವೇ ಕ್ರಿಯೆ. ಅವೆರಡರ ಸಂಗಮ ಮುಖ್ಯ. ಅರಿವಿನ ಜೊತೆಗೆ ಆಚಾರವಿದ್ದರೆ ಯಾರು ಸಹ ದಿಕ್ಕು ತಪ್ಪಲು ಸಾಧ್ಯವಿಲ್ಲ ಎಂದು ನುಡಿದರು.  21 ಜಿಲ್ಲೆಗಳಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ಪರಿಣಾಮಕಾರಿ ನಡೆದಿದೆ. ಎಲ್ಲೆಲ್ಲೂ ಇಲ್ಲದ ಅಬ್ಬರ ದಾವಣಗೆರೆಯಲ್ಲಿ ಕಂಡುಬಂದಿದೆ. ಇದು ಅಬ್ಬರದ ಕಾರ್ಯಕ್ರಮವಲ್ಲ, ಆದರ್ಶದ, ಸಕಲರಿಗೂ ಒಳಿತನ್ನು ಬಯಸುವ, ನಮ್ಮ ಅಂತರಂಗವನ್ನು ನೋಡಿಕೊಳ್ಳುವ ಕಾರ್ಯಕ್ರಮ. ನಮ್ಮಲ್ಲಿರುವಂತ ಕ್ಷುಲ್ಲಕ ಭಾವನೆಗಳನ್ನು ಕಳೆದುಕೊಂಡು  ಮನುಕುಲವನ್ನು ಅಪ್ಪಿಕೊಳ್ಳುವಂತ ಕಾರ್ಯಕ್ರಮ. 12ನೇ ಶತಮಾನದಲ್ಲಿ ಸಮಾಜ ಎಷ್ಟು ಗೊಂದಲಕ್ಕೆ ಒಳಗಾಗಿತ್ತು ಅಸಮಾನತೆ ಬಂದಿತ್ತು. ಅಂತಹ ಸಂದರ್ಭದಲ್ಲಿ ಬಸವಾದಿ ಶಿವಶರಣರು ಕಲ್ಯಾಣವನ್ನು ಕೇಂದ್ರವಾಗಿಸಿಕೊಂಡು ಅನುಭವ ಮಂಟಪದ ಮೂಲಕ ಆದರ್ಶಗಳನ್ನು ಬಿತ್ತುವ ಕಾರ್ಯವನ್ನು ಮಾಡಿದ್ದರು. ಲೋಕಕ್ಕೆ ಆದರ್ಶಗಳನ್ನು ತಿಳಿಸುವ ಮುನ್ನ ಅವರು ತಮಗೆ ತಾವು ಆದರ್ಶಗಳನ್ನು ಹೇಳಿಕೊಂಡಿದ್ದರು. ನಾವೆಲ್ಲರು ಕೂಡ ಬೇರೆಯವರ ದೋಷಗಳನ್ನು ಹೇಳಲು ಕಾತುರರಾಗಿರುತ್ತೇವೆ. ಆದರೆ ವ್ಯಕ್ತಿಗತ ದೋಷಗಳನ್ನು ತಿದ್ದುಕೊಳ್ಳಲು ಪ್ರಾಮಾಣಿಕ ಸಂಕಲ್ಪ ಮಾಡುವುದಿಲ್ಲ, 12ನೇ ಶತಮಾನದಲ್ಲಿ ಲೋಕಕಲ್ಯಾಣಕ್ಕಿಂತ ಆತ್ಮಕಲ್ಯಾಣಕ್ಕೆ ಒತ್ತು ನೀಡಲಾಗಿತ್ತು. ಅಂದು ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಮೂಲಕ ಸಮಾಜದ ಕಾರ್ಯವನ್ನು ಕಟ್ಟುವಲ್ಲಿ ಶರಣರು ಕ್ರಿಯಾಶೀಲರಾಗಿದ್ದರು. ಇಂದಿನ ದಿನಮಾನಗಳನ್ನು ನೋಡಿದರೆ 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಯಾವ ರೀತಿಯ ಅಸಮಾನತೆಗಳಿತ್ತು ಆ ಎಲ್ಲಾ ಅಸಮಾನತೆಗಳು ಇನ್ನಷ್ಟು ವಿಜೃಂಭಿಸುತ್ತಿದೆ. ಒಂದು ಕಡೆ ಜಾತಿ, ಮತ್ತೊಂದು ಕಡೆ ಲಿಂಗತಾರತಮ್ಯ, ಭ್ರಷ್ಟಾಚಾರ, ಅಧಿಕಾರ ಮದ, ಅರ್ಥಮದ, ಕುಲಮದಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಿ ಸಮಸಮಾಜವನ್ನು ನಿರ್ಮಾಣ ಮಾಡುವ ಕಾಯಕದಲ್ಲಿ ಯಶಸ್ಸು ಕಂಡವರು ಬಸವಾದಿ ಶಿವಶರಣರು. ಅಂತಹ ಯಶಸ್ಸನ್ನು ಕಾಣಬೇಕಾಗಿರುವುದು ಇಂದಿನ ಅಗತ್ಯ.  ಸಮಾಜದಲ್ಲಿ ಸಾಕಷ್ಟು ಮೌಢ್ಯಗಳು ವಿಜೃಂಭಿಸುತ್ತಿದೆ ಅವುಗಳೆಲ್ಲವು ನಿವಾರಣೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಡಾ.ದಾದಾಪೀರ್ ನವಿಲೆಹಾಳ್ ಹಾಗೂ ಅರುಣಕುಮಾರಿ ಬಿರಾದಾರ್ ಮುಕ್ತ ಸಂವಾದ ನಡೆಸಿದರು. ಕಸಾಪ ಅಧ್ಯಕ್ಷ ಡಾ.ಮಂಜುನಾಥ್ ಕುರ್ಕಿ, ಹೆಚ್.ಕೆ.ರಾಮಚಂದ್ರಪ್ಪ, ಧನಂಜಯ ಕಡ್ಲೆಬಾಳು, ಶಿವಗಂಗಾ ಶ್ರೀನಿವಾಸ್, ಶಿವಕುಮಾರ್, ಶಶಿಧರ್ ಹೆಮ್ಮನಬೇತೂರು ಸೇರಿದಂತೆ ಅನೇಕರಿದ್ದರು.

Leave a Comment