ಅರಣ್ಯ ವಾಸಿಗಳ ಮನೆ ಬಾಗಿಲಿಗೆ ಆರೋಗ್ಯ ಸೇವೆ

(ನಿಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೧- ತುರ್ತು ಚಿಕಿತ್ಸೆಯಿಂದ ವಂಚಿತರಾಗಿರುವ ಅರಣ್ಯ ಅವಲಂಬಿತ ಬುಡಕಟ್ಟು ಮೂಲ ನಿವಾಸಿಗಳ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ ಘಟಕಗಳನ್ನು ಒಳಗೊಂಡ 8 ಮೊಬೈಲ್ ವ್ಯಾನ್‌ಗಳಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇಂದು ಚಾಲನೆ ನೀಡಿದರು.
ವಿಧಾನಸೌಧದ ಮುಂಭಾಗ ತಲಾ 50 ಲಕ್ಷ ರೂ. ವೆಚ್ಚದ ಒಟ್ಟು 8 ಕೋಟಿ ರೂ. ಮೌಲ್ಯದ 16 ಮೊಬೈಲ್ ವ್ಯಾನ್‌ಗಳ ಪೈಕಿ ಮೊದಲನೇ ಹಂತದ 8 ವ್ಯಾನ್‌ಗಳ ಸೇವೆಗೆ ಹಸಿರು ನಿಶಾನೆ ತೋರಿದರು.
ಮೊದಲನೇ ಹಂತದಲ್ಲಿ ಕೊಡಗು ಜಿಲ್ಲೆಯ ಸೋಮವಾರ ಪೇಟೆ, ವಿರಾ‌ಜ್‌ಪೇಟ್ ಮತ್ತು ಮಡಿಕೆರಿ ತಾಲ್ಲೂಕುಗಳು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹೆಗ್ಗಡದೇವನಕೋಟೆ, ಹುಣಸೂರು ತಾಲ್ಲೂಕುಗಳು, ಕೊಳ್ಳೆಗಾಲ, ಎಳಂದೂರು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳು ಈ ಸಂಚಾರಿ ಮೊಬೈಲ್‌ಗಳು 8 ಜಿಲ್ಲೆಗಳಲ್ಲಿ ನೆಲೆಸಿರುವ ಜೇನುಕುರುಬ, ಕೊರಗ ಮತ್ತು ಅರಣ್ಯ ಅವಲಂಬಿತ ಬುಟಕಟ್ಟು ಜನರ ಆರೋಗ್ಯ ಸೇವೆಯನ್ನು ಒದಗಿಸಲಿದೆ.
2ನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ಪುತ್ತೂರು ತಾಲ್ಲೂಕುಗಳು, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ತರಿಕೆರೆ ತಾಲ್ಲೂಕುಗಳು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕುಗಳಲ್ಲಿ ಉಳಿದ 8 ಸಂಚಾರಿ ಘಟಕಗಳು ಕಾರ್ಯನಿರ್ವಹಿಸಲಿದೆ.
ಮೊಬೈಲ್ ವ್ಯಾನ್‌ಗಳಿಗೆ ಹಸಿರು ನಿಶಾನೆ ತೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರತಿ ಸಂಚಾರಿ ಆರೋಗ್ಯ ಘಟಕವು ವೈದ್ಯರು, ಶುಶ್ರೂಷಕರು, ಪ್ಯಾರಾಸಿಸ್ಟ್ ಲ್ಯಾಬ್ ಟೆಕ್ನೀಷಿಯನ್, ಕಿರಿಯ ಆರೋಗ್ಯ ಸಹಾಯಕಿ ಹಾಗೂ ಚಾಲಕರ ತಂಡವನ್ನು ಒಳಗೊಂಡಿರುತ್ತದೆ ಎಂದರು.
ಸಂಚಾರಿ ಘಟಕಗಳು, ಪ್ರತಿನಿತ್ಯ ಬೆಳಿಗ್ಗೆ ಹಾಗೂ ಮಧ್ಯಾಹ್ನ 2 ಗ್ರಾಮಗಳಿಗೆ ಭೇಟಿ ನೀಡಿ ಮೂಲ ನಿವಾಸಿಗಳಾದ ಜೇನುಕುರುಬ, ಕೊರಗ ಮತ್ತು ಅರಣ್ಯ ಅವಲಂಬಿತ ಬುಡಕಟ್ಟು ಜನರು ವಾಸಿಸುವ ಜಿಲ್ಲೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಿದೆ ಎಂದರು.
ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಕ್ರಿಯಾ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಖಾಸಗಿ ಸಹಭಾಗಿತ್ವ ಹಾಗೂ ಯುನೈಟೆಡ್ ಸೋಷಿಯಲ್ ವೆಲ್‌ಫೇರ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

Leave a Comment