ಅರಣ್ಯ ಇಲಾಖೆ ಪಿಸಿಬಿ ನೌಕರರ ಅನಿರ್ದಿಷ್ಟ ಧರಣಿ 19 ರಿಂದ

ಕಲಬುರಗಿ ಫೆ 16: ಜಿಲ್ಲೆಯ ಅರಣ್ಯ ಇಲಾಖೆಯ ಸಾಮಾಜಿಕ ಮತ್ತು ಪ್ರಾದೇಶಿಕ ವಿಭಾಗದಲ್ಲಿ ಕಳೆದ 15-20 ವರ್ಷಗಳಿಂದ ಪಿಸಿಬಿ( ಪೆಟ್ಟಿ ಕ್ಯಾಶ್ ಬುಕ್) ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 200 ಜನ ನೌಕರರು ತಮ್ಮ ವೇತನವನ್ನು ಬ್ಯಾಂಕ್ ಮೂಲಕ ಪಾವತಿಸುವಂತೆ ಆಗ್ರಹಿಸಿ ಫೆ 19 ರಿಂದ  ಅರಣ್ಯ ಇಲಾಖೆ ಕಚೇರಿ ಎದುರು ಅನಿರ್ದಿಷ್ಟ ಧರಣಿ  ಕೈಗೊಳ್ಳಲಿದ್ದಾರೆ.

ಈ ನೌಕರರಿಗೆ ನಿಯಮಾನುಸಾರ ಮಾಸಿಕ ಸುಮಾರು 11 ಸಾವಿರ ರೂ ವೇತನ ಪಾವತಿಸುವಂತೆ ನಿರ್ದೇಶನವಿದ್ದರೂ ,2 ರಿಂದ 6 ಸಾವಿರ ರೂ ವೇತನ ನೀಡಲಾಗುತ್ತಿದೆ. ಈ ಶೋಷಣೆ ನಿಲ್ಲಿಸಲಿದ್ದರೆ ಫೆ 21 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವದು ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ನೌಕರರು ಸಸ್ಯ ಸಂರಕ್ಷಣೆ,ಸಸ್ಯ ಕ್ಷೇತ್ರಗಳಲ್ಲಿ ಸಸ್ಯ ಬೆಳೆಸುವದು,ನಡುತೋಪು ಕಾವಲುಗಾರರಾಗಿ.ಬೇಸಿಗೆ ಕಾಲದಲ್ಲಿ ನೀರುಣಿಸುವದು ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡುತ್ತಾರೆ. ಇವರಿಗೆ ಪಿಎಫ್, ಇಎಸ್ ಐ ಸೌಲಭ್ಯ ಸಹ ನೀಡಲಾಗಿಲ್ಲ. ಇವರ ದುಸ್ಥಿತಿಯನ್ನು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ವಿವರಿಸಲಾಗಿದೆ. ಆದರೂ ಈ ನೌಕರರ ಮನವಿ ಅರಣ್ಯರೋದನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು

ಸುದ್ದಿಗೋಷ್ಠಿಯಲ್ಲಿ  ಶ್ರೀಮಂತ,ಷಣ್ಮುಖ,ಶಿವರಾಯ ಸೋಮಶೆಖರ ಸೇರಿದಂತೆ ಹಲವರಿದ್ದರು..

Leave a Comment