ಅಯೋಧ್ಯೆ ವಿವಾದಕ್ಕೆ ಹೊಸತಿರುವು

ನವದೆಹಲಿ, ಅ. ೨೧- ಅಯೋಧ್ಯೆಯ ರಾಮಜನ್ಮ ಭೂಮಿ, ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಕಕ್ಷಿದಾರರಾದ, ಸುನ್ನಿ ವಕ್ಫ್ ಬೋರ್ಡ್‌ನಲ್ಲಿ ಎದ್ದಿರುವ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಶತಮಾನದಷ್ಟು ಹಳೆಯದಾದ ಈ ಪ್ರಕರಣಕ್ಕೆ ಈಗ ಹೊಸತಿರುವು ಬಂದಿದೆ.
ರಾಮಜನ್ಮ ಭೂಮಿ, ಭೂ ವಿವಾದ ಕುರಿತಂತೆ, ಸುಪ್ರೀಂ ಕೋರ್ಟ್, ಕಳೆದ ೪೦ ದಿನಗಳಿಂದ ನಿರಂತರವಾಗಿ ಪ್ರತಿದಿನವೂ ವಿಚಾರಣೆ ನಡೆಸಿ, ತೀರ್ಪನ್ನು ಕಾದಿರಿಸಿದೆ. ತೀರ್ಪು ಹೊರಬರಲು ಕ್ಷಣಗಣನೆಯೂ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಪ್ರಮುಖ ಕಕ್ಷಿದಾರರಾಗಿರುವ ಸುನ್ನಿ ವಕ್ಫ್ ಬೋರ್ಡ್‌ನಲ್ಲಿ ಈ ವಿವಾದ ಬಗೆಹರಿಯುವ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ.
ಬೋರ್ಡ್‌ನ ಒಂದು ಗುಂಪು ಈ ವಿವಾದ ಪರಿಹಾರ ನ್ಯಾಯಾಲಯದ ತೀರ್ಪಿನ ಮೂಲಕವೇ ಬಗೆಹರಿಯಲಿ ಎಂದು ವಾದಿಸಿದರೆ, ಇನ್ನೊಂದು ಗುಂಪು ಈ ವಿವಾದ ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿರುವುದಾಗಿ ಹೇಳಿದೆ.
ಸುನ್ನಿ ವಕ್ಫ್ ಬೋರ್ಡ್‌ನ ವಕೀಲ ಹಾಗೂ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಈ ವಿವಾದಿತ ಭೂಮಿ ವಕ್ಫ್ ಬೋರ್ಡ್‌ಗೆ ಸೇರಬೇಕು. ಈ ಕುರಿತಂತೆ, ನ್ಯಾಯಪೀಠ ನೀಡುವ ತೀರ್ಪನ್ನು ಕಾಯುತ್ತಿದ್ದೇವೆ ಎಂದು ಹೇಳಿದ್ದರೆ, ಇನ್ನೊಂದು ಗುಂಪಿನ ಪರವಾಗಿ, ನ್ಯಾಯಾಲಯದಲ್ಲಿ ವಾದ ಮಂಡಿಸಿರುವ ಶಾಹಿದ್ ರಿಜ್ವಿ, ಈ ವಿವಾದದಲ್ಲಿರುವ ಪ್ರಮುಖ ಕಕ್ಷಿದಾರರು ನ್ಯಾಯಾಲಯದ ಹೊರಗೆ, ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿವೆ ಎಂದಿದ್ದಾರೆ.
ಪ್ರಕರಣ ನ್ಯಾಯಾಲಯದ ಮುಂದೆ ಇರುವಾಗ ಕಕ್ಷಿದಾರರು ತಮ್ಮದೇ ಆದ ವಾದವನ್ನು ಮಂಡಿಸಲು ಅರ್ಹತೆ ಹೊಂದಿದ್ದಾರೆ. ಆದರೆ ಇಂತಹ ಸೂಕ್ಷ್ಮ ವಿಷಯಗಳು ನ್ಯಾಯಾಲಯದ ಹೊರಗೆ ಪರಸ್ಪರ ಸಂಧಾನದ ಮೂಲಕ ಬಗೆಹರಿಯುವುದಾದರೆ, ಇದಕ್ಕೆ ನ್ಯಾಯಪೀಠದ ವಿರೋಧವೇನೂ ಇರುವುದಿಲ್ಲ ಎಂದಿದ್ದಾರೆ
ಈ ವಿವಾದ ಕುರಿತಂತೆ, ವಾದ – ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ನ್ಯಾಯಪೀಠ, ಈ ವಿವಾದ ಅತಿ ಸಂವೇದನಾಶೀಲದಿಂದ ಈ ಕುರಿತಂತೆ, ನ್ಯಾಯಪೀಠ ತೀರ್ಪು ನೀಡುವುದಕ್ಕಿಂತಲೂ ಈ ವಿವಾದ ಸಂಧಾನದ ಮೂಲಕ ನ್ಯಾಯಾಲಯದ ಹೊರಗೆ ತೀರ್ಮಾನವಾದರೆ, ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. ಅದರಂತೆ, ಮಾರ್ಚ್ ತಿಂಗಳಲ್ಲಿ ತನ್ನ ಉಸ್ತುವಾರಿಯಲ್ಲಿ ತಜ್ಞರ ಸಂಧಾನ ಸಮಿತಿಯನ್ನು ನೇಮಿಸಿತ್ತು. ಆದರೆ ಈ ಸಂಧಾನ ಸಮಿತಿ ಕುರಿತಂತೆ, ಕಕ್ಷಿದಾರರಲ್ಲಿ ಸಮ್ಮತ ಮೂಡದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ೫ ಮಂದಿ ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠದಲ್ಲಿ ಚರ್ಚೆ ನಡೆಸಲು ಕೈಗೆತ್ತಿಕೊಂಡಿತು.
ಆಗಸ್ಟ್ ೬ ರಿಂದ ಪ್ರತಿನಿತ್ಯದಂತೆ, ೪೦ ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠ ಅಕ್ಟೋಬರ್ ೧೬ ರಂದು ವಿಚಾರಣೆಯನ್ನು ಮುಕ್ತಾಯಗೊಳಿಸಿ, ತೀರ್ಪನ್ನು ಕಾಯ್ದಿರಿಸಿದೆ. ಈ ಕುರಿತ ತೀರ್ಪು ನವೆಂಬರ್ ೧೭ರ ಒಳಗೆ ಯಾವುದೇ ಕ್ಷಣದಲ್ಲಿ ಹೊರಬೀಳಬಹುದಾಗಿದೆ.

Leave a Comment