ಅಯೋಧ್ಯೆ ಪ್ರಕರಣದಿಂದ ಧವನ್‌ಗೆ ಕೊಕ್

ನವದೆಹಲಿ, ಡಿ. ೩- ಅಯೋಧ್ಯೆ ವಿವಾದ ಪ್ರಕರಣದಲ್ಲಿ ಸುನ್ನಿ ವಕ್ಫ್ ಬೋರ್ಡ್ ಮತ್ತು ಇತರೆ ಮುಸ್ಲಿಂ ಪಕ್ಷಗಳ ಪರ ವಾದ ಮಂಡಿಸಿದ್ದ ವಕೀಲ ರಾಜೀವ್ ಧವನ್ ಅವರನ್ನು ಅಯೋಧ್ಯೆ ಪ್ರಕರಣದಿಂದ ಕೈಬಿಟ್ಟಿರುವುದನ್ನು ಸ್ವತಃ ಧವನ್ ಅವರೇ ಫೇಸ್‌ಬುಕ್‌ನಲ್ಲಿ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೈತ್ ಉಲೇಮಾ-ಏ- ಹಿಂದ್ ಸಂಘಟನೆ ಪರ ವಕೀಲ ಔರ್ ಇಜಾಜ್ ಮುಖ್ಬೂಲ್, ಬಾಬರಿ ಪ್ರಕರಣದಿಂದ ನನ್ನನ್ನು ಕೈಬಿಟ್ಟಿದ್ದಾರೆ. ಯಾವುದೇ ತಕರಾರು ವ್ಯಕ್ತಪಡಿಸದೇ ಕೈಬಿಟ್ಟಿರುವುದನ್ನು ಸ್ವೀಕರಿಸಲು ತಮಗೆ ಔಪಚಾರಿಕ ಪತ್ರವನ್ನು ಕಳುಹಿಸಿದ್ದಾರೆ. ಪ್ರಕರಣದಲ್ಲಿ ಅಥವಾ ಮರುಪರಿಶೀಲನೆಯಲ್ಲಿ ಇನ್ನು ಮುಂದೆ ನಾನು ಭಾಗಿಯಾಗುವುದಿಲ್ಲ ಎಂದು ಧವನ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಇದರಿಂದ ಬೇಸರಗೊಂಡಿರುವ ಧವನ್, ಅನಾರೋಗ್ಯದ ಕಾರಣ ನೀಡಿ ಜಮೈತ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮದಾನಿ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಸೂಚನೆ ನೀಡಿರುವುದು ಸಂಪೂರ್ಣ ಅಸಂಬದ್ಧವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಮೈತ್ ಸಂಘಟನೆಯು ಅಯೋಧ್ಯೆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ನಿನ್ನೆಯಷ್ಟೇ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವ ಬೆನ್ನಲ್ಲೆ ರಾಜೀವ್ ಧವನ್‌ರನ್ನು ಪ್ರಕರಣದಿಂದ ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನವೆಂಬರ್ ೯ರಂದು ರಾಮಜನ್ಮ ಭೂಮಿಯು ರಾಮಲಲ್ಲಾಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತ್ತು. ಮಸೀದಿ ನಿರ್ಮಿಸಲು ಪ್ರತ್ಯೇಕವಾಗಿ ೫ ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.

Leave a Comment