ಅಯೋಧ್ಯಾ ದಾಳಿ; ನಾಲ್ವರಿಗೆ ಜೀವಾವಧಿ, ಓರ್ವ ಆರೋಪಮುಕ್ತ

ಪ್ರಯಾಗ್ ರಾಜ್, ಜೂ 18 – ಅಯೋಧ‍್ಯೆಯ ವಿವಾದಿತ ರಾಮಮಂದಿರದ ಆವರಣದಲ್ಲಿ 2005ರಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ ಐವರು ಆರೋಪಿಗಳ ಪೈಕಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಪರಿಶಿಷ್ಟ ಜಾತಿ, ಪಂಗಡದ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ದಿನೇಶರ್ ಚಾಂದ್, ನಾಲ್ವರು ಅಪರಾಧಿಗಳಿಗೆ ತಲಾ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಇನ್ನೋರ್ವ ಆರೋಪಿ ಮೊಹಮ್ಮದ್ ಅಜೀಜ್ ಎಂಬಾತನನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ.
ಈ ಐವರ ಮೇಲೆ ಉಗ್ರ ದಾಳಿಗೆ ಸಂಚು ರೂಪಿಸಿದ, ಉಗ್ರವಾದಿಗಳಿಗೆ ಶಸ್ತ್ರಾಸ್ತ್ರಗಳು ಸೇರಿ ಇತರ ಅಗತ್ಯ ವಸ್ತುಗಳನ್ನು ಒದಗಿಸಿದ ಆರೋಪ ಹೊರಿಸಲಾಗಿತ್ತು.
2005ರ ಜುಲೈ 5ರಂದು ರಾಮಮಂದಿರ ಪ್ರವೇಶಿಸಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಐವರು ಜೈಷೆ ಮೊಹಮ್ಮದ್ ಉಗ್ರರು ಹಾಗೂ ಇಬ್ಬರು ಸ್ಥಳೀಯರು ಹತರಾಗಿದ್ದರು. ಏಳು ಕೇಂದ್ರೀಯ ಮೀಸಲು ಪಡೆಯ ಪೊಲೀಸರು, ನಾಲ್ವರು ಯೋಧರು ಗಾಯಗೊಂಡಿದ್ದರು.
ಘಟನೆ ಸಂಬಂಧ ಉತ್ತರಪ್ರದೇಶ ಪೊಲೀಸರು ಡಾ. ಇರ್ಫಾನ್, ಆಶಿಕ್ ಇಕ್ಬಾಲ್, ಶಕೀಲ್ ಅಹಮದ್, ಮೊಹಮ್ಮದ್ ನಸೀಮ್ ಹಾಗೂ ಮೊಹಮ್ಮದ್ ಅಜೀಜ್ ಎಂಬುವರನ್ನು ಬಂಧಿಸಿದ್ದರು. ಅವರನ್ನು ಅಲಹಾಬಾದ್ ನ ನೈನಿ ಜೈಲಿನಲ್ಲಿರಿಸಲಾಗಿತ್ತು. ಇವರಲ್ಲಿ ಡಾ. ಇರ್ಫಾನ್ ಉತ್ತರಪ್ರದೇಶದವನಾದರೆ, ಉಳಿದವರು ಜಮ್ಮು ಕಾಶ್ಮೀರದ ಪೂಂಚ್ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.

Leave a Comment