ಅಮ್ಯೂಸ್‍ಮೆಂಟ್ ಪಾರ್ಕ್ ವಿಚಾರದಲ್ಲಿ ಕಿತ್ತಾಟ – ಆತ್ಮಹತ್ಯೆಗೆ ಮಾಲೀಕ ಯತ್ನ

ಚಿಕ್ಕಬಳ್ಳಾಪುರ, ಫೆ 12-  ಇಲ್ಲಿ ನಡೆಯುತ್ತಿರುವ  ಚಿತ್ರಾವತಿ ಜಾತ್ರೆಯಲ್ಲಿ  ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ವಿಚಾರದಲ್ಲಿ ಇಬ್ಬರು ಮಾಲೀಕರುಗಳ ನಡುವಿನ ಗಲಾಟೆಯಲ್ಲಿ ಓರ್ವ ಮಾಲೀಕ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಅಮ್ಯೂಸ್‍ಮೆಂಟ್ ಪಾರ್ಕಿನ ಮಾಲೀಕ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಗಳಲ್ಲಿ, ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಮಾಡುವುದರ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿ ಶ್ರೀನಿವಾಸ್ ಹಾಗೂ ಬೆಂಗಳೂರು ಮೂಲದ ರಾಜೇಶ್ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಎಂದಿನಂತೆ ಈ ಬಾರಿ ಜಿಲ್ಲೆಯ ಚಿತ್ರಾವತಿ ಬಳಿ ಇರುವ ಶ್ರೀ ಸುಬ್ರಮ್ಮಣ್ಯಶ್ವರ ಜಾತ್ರೆಯಲ್ಲಿ ಸ್ಪರ್ಧೆಗಿಳಿದು ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದರು.

ಆದರೆ ಒಂದೇ ಜಾಗದಲ್ಲಿ ಎರಡೆರಡು ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ ಕಾರಣ ಇಬ್ಬರಿಗೂ ನಷ್ಟವಾಗಿದೆ. ಮತ್ತೊಂದೆಡೆ ರಾಜೇಶ್ ಕಡೆಯವರು ತನಗೆ ಪ್ರಾಣ ಬೆದರಿಕೆ ಹಾಕಿ ಪದೆ ಪದೆ ತನಗೆ ತೊಂದರೆ ನಿಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸ್ ಇಂದು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡ ಸ್ಥಳಿಯರು ಶ್ರೀನಿವಾಸ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

Leave a Comment