ಅಮ್ಮನ ಮನೆಯಿಂದ ಮತ್ತೆ ಬಣ್ಣದ ಬದುಕಿಗೆ: ರಾಘವೇಂದ್ರ ರಾಜಕುಮಾರ್

ಬಳ್ಳಾರಿ,ಫೆ.11: ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗದಂತಹ ಜನ ಮೆಚ್ಚುಗೆಯ ಚಲನ ಚಿತ್ರಗಳ ನಾಯಕ ನಟ ರಾಘವೇಂದ್ರ ರಾಜಕುಮಾರ್ ಮತ್ತೆ ತಮ್ಮ 21 ನೇ ಚಲನ ಚಿತ್ರ ‘ಅಮ್ಮನ ಮನೆ’ ಮೂಲಕ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈವರೆಗೆ 20 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದು, ಅನಾರೋಗ್ಯದಿಂದ ಬಣ್ಣದ ಬದುಕಿನಿಂದ ದೂರವಾಗಿದ್ದೆ. ಈ ಚಿತ್ರದ ಮೂಲಕ ಮತ್ತೆ ಸಿನಿರಂಗ ಪ್ರವೇಶ ಮಾಡುತ್ತಿರುವೆ ಎಂದು ತಿಳಿಸಿದರು.

ಈ ಸಿನಿಮಾ ತಾಯಿ, ಮಗನ ಬಾಂಧವ್ಯದ ಬಗ್ಗೆ ಮನೆ ಮಂದಿಯಲ್ಲ ಕುಳಿತು ನೋಡುವಂತಹುದಾಗಿದೆ. ಇದನ್ನು ಇಂದು ಸಂಜೆ ಸಮೀಪದ ಸಂಗನಕಲ್ಲು ಗ್ರಾಮದ ಗ್ರೀನ್ ವ್ಯಾಲಿ ಶಾಲೆಯ ವಾರ್ಷೀಕೋತ್ಸವ ಸಮಾರಂಭದಲ್ಲಿ ಸಿನಿಮಾದ ಟೀಜರ್ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ಈ ಸಿನಿಮಾದಿಂದ ನನ್ನ ಜವಾಬ್ದಾರಿ ಹೆಚ್ಚುತ್ತಿದ್ದು, ಒಂದಿಷ್ಟು ರೋಗಿಗಳಿಗೆ ಸ್ಫೂರ್ತಿ ಬಂದರೆ ಸಾರ್ಥಕ ಎಂದರು.

ಗುಣಮಟ್ಟ ಕುಸಿತ:

ಈ ಹಿಂದೆ ರಾಜಕುಮಾರಂತಹ ನಟ, ಚಿ.ಉದಯಶಂಕರ್ ಅಂತಹ ರಚನಾಕಾರರು, ಪುಟಣ್ಣಕಣಗಲ್ ರಂತಹ ನಿರ್ದೇಶಕರಿಂದ ಸಿನಿಮಾಗಳ ಗುಣಮಟ್ಟ ಅತ್ಯನ್ನತವಾಗಿತ್ತು. ಆದರೆ, ಇಂದು ಅಂತಹ ಪ್ರೌಢಿಮೆಯ ನಟ ನಿರ್ದೇಶಕ, ರಚನೆಕಾರರ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಸಿನಿಮಾಗಳ ಗುಣಮಟ್ಟ ಕುಸಿಯುತ್ತಿದೆ. ಈಗ ಸಿನಿಮಾವನ್ನೇ ನಂಬಿ 10 ಸಾವಿರ ಕುಟುಂಬಗಳು ಜೀವಿಸುತ್ತಿವೆ. ಅವರೆಲ್ಲರೂ ಬದುಕಬೇಕೆಂದರೆ, ಸಿನಿಮಾಗಳ ಪೈರಸಿ ನಿಲ್ಲಬೇಕು ಎಂದರು.

ಈ ಹಿಂದೆ ತಮ್ಮ ಬ್ಯಾನರ್‍ಗಳ ಅಡಿ ತಾಯಿ ಪಾರ್ವತಮ್ಮ ರಾಜಕುಮಾರ್, ಚಿಕ್ಕಪ್ಪ ವರದರಾಜ ಮತ್ತು ಚಿ.ಉದಯಶಂಕರ್ ಅವರುಗಳಿಂದ ಉತ್ತಮ ಚಿತ್ರಗಳ ರಚನೆಯಾದ ಬಗ್ಗೆ ತಿಳಿಸಿ, ಸಧ್ಯದಲ್ಲೇ ತಮ್ಮ ಚಿಕ್ಕ ಮಗ ಯುವ ರಾಜಕುಮಾರ ಸಹ ಚಿತ್ರರಂಗ ಪ್ರವೇಶ ಮಾಡಲಿದ್ದಾರೆ ಎಂದು ತಿಳಿಸಿದರು.

ಒಳ್ಳೆಯದಾಗಲಿ:
ನಾವು ಯಾವತ್ತು ರಾಜಕೀಯವನ್ನು ಬಯಸಲ್ಲ. ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವುದಾದರೆ, ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವೆ. ಆದರೆ, ಬೆಂಬಲ ಎಂದು ಹೇಳಲಾರೆ.

ಭವಿಷ್ಯದ ನಟ ಮಂಜುನಾಥ ಮಾತನಾಡಿ, ರಾಘವೇಂದ್ರ ರಾಜಕುಮಾರ ಅವರು ಮತ್ತೆ ಬಣ್ಣ ಹಚ್ಚುತ್ತಿರುವುದು ತುಂಬಾ ಖುಷಿ ಕೊಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ‘ಅಮ್ಮನ ಮನೆ’ ನಿರ್ಮಾಪಕ ಕುಮಾರ್, ಗ್ರೀನ್ ವ್ಯಾಲಿ ಶಾಲೆಯ ಪವನ್ ಕುಮಾರ, ವಿ.ಕೆ.ಬಸಪ್ಪ ಮೊದಲಾದವರು ಇದ್ದರು.

Leave a Comment