ಅಮೇಥಿಯ ಪಿಂಡಾರ ಡಿಜಿಟಲ್ ಗ್ರಾಮ

ಅಮೇಥಿ (ಉ.ಪ್ರ), ಆ. ೩೧: ಅಮೇಥಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಪಿಂಡಾರ ಠಾಕೂರ್ ಗ್ರಾಮವು ನಾಳೆಯಿಂದಲೇ (ಸೆ.೧ ರಿಂದ) ಪೂರ್ಣ ಡಿಜಿಟಲ್ ಗ್ರಾಮವಾಗಿ ಪರಿವರ್ತನೆಗೊಳ್ಳಲಿದೆ. ಗ್ರಾಮದಲ್ಲಿ ಒಂದು ‘ಒತ್ತುಗುಂಡಿ (ಕ್ಲಿಕ್)’ ಮೂಲಕ ೨೦೬ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯುವಂತೆ ಗ್ರಾಮವನ್ನು ರೂಪಾಂತರಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಸಂಸತ್ ಕ್ಷೇತ್ರ ಇದಾಗಿದ್ದು, ಜಿಲ್ಲೆಯ ಮುಸಾಫಿರ್‌ಖಾನ ತಾಲ್ಲೂಕಿಗೆ ಸೇರಿದ ಈ ಗ್ರಾಮವು ಕೇಂದ್ರ ಸರ್ಕಾರದ ‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮದ ಅನ್ವಯ ಪೂರ್ಣ ಡಿಜಿಟಲೀಕರಣಗೊಂಡಿದೆ. ರಾಹುಲ್ ಗಾಂಧಿಯ ರಾಜಕೀಯ ವೈರಿ ಎಂದೇ ಗುರುತಿಸಲ್ಪಟ್ಟಿರುವ ಕೇಂದ್ರ ಜವಳಿ ಖಾತೆ ಸಚಿವರಾದ ಸ್ಮೃತಿ ಇರಾನಿ ಅವರು ಈ ಗ್ರಾಮದ ಡಿಜಿಟಲೀಕರಣಕ್ಕೆ ಶ್ರಮ ವಹಿಸಿದ್ದು, ಸೆ. ೧ ರಂದು ಅವರೇ ಈ ಕುರಿತಾಗಿ ಔಪಚಾರಿಕ ಉದ್ಘಾಟನಾ ಸಮಾರಂಭ ಏರ್ಪಡಿಸಿದ್ದಾರೆ; ಆ ಮೂಲಕ ಮುಂಬರುವ ಚುನಾವಣೆಯಲ್ಲಿ ರಾಹುಲ್‌ರನ್ನು ಈ ಕ್ಷೇತ್ರದಲ್ಲಿ ಪರಾಭವಗೊಳಿಸಿ ಅವರಿಗೆ ಕ್ಷೇತ್ರವೇ ಇಲ್ಲದಂತೆ ಮಾಡಲು ಹೊರಟಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ. ಕಳೆದ ೨೦೧೪ರ ಚುನಾವಣೆಯಲ್ಲಿ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಇರಾನಿ ೧ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದರು.

Leave a Comment