ಅಮೇಥಿಯೊಂದಿಗಿನ ನನ್ನ ಸಂಬಂಧ ಮುಂದುವರಿಯಲಿದೆ; ರಾಹುಲ್ ಗಾಂಧಿ

ಅಮೇಥಿ, ಜುಲೈ 10 – ಲೋಕಸಭಾ ಚುನಾವಣೆಯ ಸೋಲಿನ ನಂತರ ಇದೇ ಮೊದಲ ಬಾರಿಗೆ ಉತ್ತರಪ್ರದೇಶದ ಅಮೇಥಿ ಕ್ಷೇತ್ರಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಷೇತ್ರದೊಂದಿಗಿನ ತಮ್ಮ ಸಂಬಂಧ ಮುಂದುವರಿಯಲಿದ್ದು, ತಾವು ಇಲ್ಲಿನ ಜನರ ಅಗತ್ಯಗಳಿಗೆ ಸದಾ ಸ್ಪಂದಿಸುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಗೌರಿ ಗಂಜ್ ನ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಾವು ಪರಾಭವಗೊಂಡಿದ್ದರೂ, ಕ್ಷೇತ್ರಕ್ಕೆ ಆಗಮಿಸಿ, ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಅಮೇಥಿಯೊಂದಿಗಿನ ತಮ್ಮ ಸಂಬಂಧ ಮುಂದುವರಿಯಲಿದ್ದು, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇಲ್ಲಿಗೆ ನಿಯಮಿತವಾಗಿ ಭೇಟಿ ನೀಡಲಿದ್ದಾರೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 1 ಸಾವಿರ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿದ ರಾಹುಲ್, ತಾವು ಕೇರಳದ ವಯನಾಡಿನಿಂದ ಆರಿಸಿಬಂದಿದ್ದು, ಆ ಕ್ಷೇತ್ರದ ಅಭಿವೃದ್ಧಿಗೆ ಕೂಡ ಸಮಯ ನೀಡಬೇಕಾಗುತ್ತದೆ. ಆದರೆ, ಸಮಯ ದೊರೆತಾಗಲೆಲ್ಲಾ ಅಮೇಥಿಗೂ ಭೇಟಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಸಂಜಯ್ ಸಿಂಗ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಅಜಯ್ ಕುಮಾರ್ ಲಾಲು ಉಪಸ್ಥಿತರಿದ್ದರು. ಸಭೆಯಲ್ಲಿ ಕೆಲ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಯೋಗೇಂದ್ರ ಮಿಶ್ರಾ ಅವರೇ ರಾಹುಲ್ ಗಾಂಧಿಯ ಸೋಲಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ರಾಹುಲ್ ನಿರಾಕರಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ ದಪಕ್ಷದ ಹಿರಿಯ ನಾಯಕ ಅಬ್ದುಲ್ ಹಸನ್, ರಾಹುಲ್ ಗಾಂಧಿ ಅವರು ಕಾರ್ಯಕರ್ತರಲ್ಲಿ ಮರು ಜೀವ ತುಂಬಿದ್ದು, ಪ್ರತಿಯೊಬ್ಬರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ ಎಂದರು.
ಇದಕ್ಕೂ ಮುನ್ನ ಅಮೇಥಿಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಪಕ್ಷದ ನಾಯಕರು ಲಖನೌ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇವಾ ದಳದ 50 ಸದಸ್ಯರು, ‘ರಾಹುಲ್ ಗಾಂಧಿ ನೀವು ಹೋರಾಟ ಮುಂದುವರಿಸಿ, ನಾವು ನಿಮ್ಮ ಜೊತೆಗಿದ್ದೇವೆ’ ಎಂದು ಘೋಷಣೆ ಕೂಗಿದರು.

ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಹಲವೆಡೆ ಭಾರಿ ವಿರೋಧವನ್ನು ಕೂಡ ಎದುರಿಸಬೇಕಾಯಿತು. ಇಲ್ಲಿನ ಮುಷಿಗಂಜ್ ಪ್ರದೇಶದ ಸಂಜಯ್ ಗಾಂಧಿ ಆಸ್ಪತ್ರೆಯೆದರು ಕೆಲವರು, ‘ಈ ಆಸ್ಪತ್ರೆಗೆ ಬಂದವರು ಜೀವ ಉಳಿಸಿಕೊಂಡು ಹೋಗುವುದಿಲ್ಲ. ನಮಗೆ ನ್ಯಾಯ ಒದಗಿಸಿ ‘ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

Leave a Comment