ಅಮೆರಿಕಾ ಅಧ್ಯಕ್ಷರ ನಿಲುವು: ಪ್ರಧಾನಿಗೆ ಕಾಂಗ್ರೆಸ್ ಸವಾಲು

ನವದೆಹಲಿ, ಫೆ. ೨೩- ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಅವರ ಭಾರತ ಭೇಟಿಗೆ ಒಂದು ದಿನ ಇರುವಾಗಲೇ ಕಾಂಗ್ರೆಸ್ ಪಕ್ಷ ಅಮೆರಿಕ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೆಚ್‌-1ಬಿ ವೀಸಾ ವ್ಯಾಪಾರ ವಹಿವಾಟು ಸೇರಿದಂತೆ ಅಮೆರಿಕ ತಾಳಿರುವ ನಿಲುವುಗಳ ಬಗ್ಗೆ ಪ್ರಶ್ನಿಸಲಿದ್ದಾರೆಯೇ? ಭಾರತಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಲುವುಗಳ ಬಗ್ಗೆ ಪ್ರಸ್ತಾಪಿಸುವರೇ? ಎಂಬ ಪ್ರಶ್ನೆಯನ್ನು ಕೇಳಿದೆ.

ಅಮೆರಿಕ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಭಾರತ ದೇಶಕ್ಕೆ ಸಂಬಂಧಿಸಿದಂತೆ ಯಾವ ಯಾವ ವಿಚಾರವನ್ನು ಪ್ರಸ್ತಾಪಿಸಲಿದೆ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್‌ನ ವಕ್ತಾರ ರಣದೀಪ್‌ಸಿಂಗ್ ಸುರ್ಜೆವಾಲ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಪ್ರಸ್ತಾಪಿಸಬೇಕಾಗಿರುವ ಕೆಲ ಪ್ರಮುಖ ವಿಚಾರಗಳ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷರ ಭಾರತ ಭೇಟಿ ಸಂದರ್ಭದಲ್ಲಿ ವ್ಯಾಪಾರದಿಂದ ಹಿಡಿದು ತಾಯ್ನಾಡಿನ ರಕ್ಷಣೆವರೆಗೂ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಪರಸ್ಪರ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕುತ್ತಿರುವ ನಡುವೆಯೇ ಪ್ರಧಾನಿ ಮೋದಿ ಅವರು, ಭಾರತ ಮತ್ತು ಭಾರತೀಯರಿಗೆ ಸಂಬಂಧಿಸಿದಂತೆ ಅಮೆರಿಕ ಕೆಲ ವಿಚಾರಗಳಲ್ಲಿ ಕೈಗೊಂಡಿರುವ ನಿಲುವುಗಳನ್ನು ಪ್ರಶ್ನಿಸುವಂತೆಯೂ ಟ್ವಿಟ್ಟರ್‌ನಲ್ಲಿ ಒತ್ತಾಯಿಸಿದ್ದಾರೆ.

ಹೆಚ್‌-1ಬಿ ವೀಸಾದ ಬದಲಾದ ನೀತಿಗಳಿಂದ ಅಮೆರಿಕದಲ್ಲಿ ಉದ್ಯೋಗಾಕಾಂಕ್ಷಿ ಭಾರತೀಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರನ್ನು ಪ್ರಶ್ನಿಸಬೇಕು ಎಂದು ಅವರು ಹೇಳಿದ್ದಾರೆ.

ಡೊನಾಲ್ಡ್‌ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗುವ ಮೊದಲು ಭಾರತೀಯರಿಗೆ ಹೆಚ್‌-1ಬಿ ವೀಸಾ ನಿರಾಕರಣೆ ಕಡಿಮೆ ಇತ್ತು, ಹೆಚ್‌-1ಬಿಗೆ ವೀಸಾಗೆ ಸಂಬಂಧಿಸಿದಂತೆ ಕಠಿಣ ವಲಸೆ ನೀತಿಗಳಿಂದ ಭಾರತೀಯರಿಗೆ ಹೆಚ್‌-1ಬಿ ವೀಸಾ ನಿರಾಕರಣೆ ಹೆಚ್ಚಾಗಿದೆ. 2005ರಲ್ಲಿ ಹೆಚ್‌-1ಬಿ ವೀಸಾ ಬಯಸಿದ್ದ ಭಾರತೀಯರಿಗೆ ಶೇ. 6ರಷ್ಟು ಮಾತ್ರ ವೀಸಾ ನಿರಾಕರಣೆ ಮಾಡಲಾಗುತ್ತಿತ್ತು. ಈಗ 2019ರಲ್ಲಿ ವೀಸಾ ನಿರಾಕರಣೆಯ ಪ್ರಮಾಣ ಶೇ. 24ಕ್ಕೆ ಏರಿದೆ. ಇದರಿಂದ ಐಟಿ ಉದ್ಯೋಗಿಗಳಿಗೆ ತೊಂದರೆಯಾಗಿದೆ ಎಂದು ಸುರ್ಜೆವಾಲಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಅಮೆರಿಕ ಪ್ರತಿವರ್ಷ 85 ಸಾವಿರ ಹೆಚ್‌-1ಬಿ ವೀಸಾ ನೀಡುತ್ತಿದ್ದು, ಶೇ. 70ರಷ್ಟು ಭಾರತೀಯರು ವೀಸಾ ಪಡೆಯುತ್ತಿದ್ದರು. ಟ್ರಂಪ್ ಅಧ್ಯಕ್ಷರಾದ ಮೇಲೆ ಹೆಚ್‌-1ಬಿ ವೀಸಾ ಪಡೆಯುವ ಭಾರತೀಯರ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನೂ ಮೋದಿ ಅವರು ಟ್ರಂಪ್ ಬಳಿ ಪ್ರಸ್ತಾಪಿಸಬೇಕು ಎಂದು ಕಾಂಗ್ರೆಸ್‌ನ ವಕ್ತಾರರು ಒತ್ತಾಯಿಸಿದ್ದಾರೆ.

ದೇಶದ ಸುರಕ್ಷತೆಯ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರು ಅಮೆರಿಕಾ ತಾಲಿಬಾನ್‌ ಜತೆ ಆಫ್ಘಾನಿಸ್ತಾನದಲ್ಲಿ ಮಾಡಿಕೊಂಡಿರುವ ಒಪ್ಪಂದದ ಬಗ್ಗೆಯೂ ಪ್ರಸ್ತಾಪಿಸಬೇಕು. ತಾಲಿಬಾನ್ ಉಗ್ರರು ಈ ಹಿಂದೆಯೇ ಭಾರತದ ವಿಮಾನವನ್ನು ಕಂದಾರ್‌ಗೆ ಅಪಹರಣ ಮಾಡಿ ಉಗ್ರ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಿಕೊಂಡಿರುವುದನ್ನೂ ಮರೆಯಬಾರದು. ಉಗ್ರ ಮಸೂದ್ ಅಜಾರ್‌ನ ಜೈಷ್-ಇ-ಮೊಹ್ಮದ್ ಸಂಘಟನೆ ಸಂಸತ್ತಿನ ಮೇಲೆ ಮತ್ತು ಪುಲ್ವಾಮಾ ಮೇಲೆ ದಾಳಿ ನಡೆಸಿದ್ದನ್ನು ಮರೆಯಲು ಸಾಧ್ಯವೇ?ಎಂದು ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿ ಅವರು ಆಂತರಿಕ ಭದ್ರತೆಯ ಬಗ್ಗೆ ಕಾಳಜಿ ಇದ್ದರೆ ಈ ವಿಚಾರವನ್ನೂ ಅಮೆರಿಕ ಅಧ್ಯಕ್ಷರ ಭೇಟಿ ವೇಳೆ ಪ್ರಸ್ತಾಪಿಸಬೇಕು ಎಂದಿದ್ದಾರೆ.

ಜಿಎಸ್‌ಪಿ ಆಧ್ಯತಾ ವ್ಯಾಪಾರ ವ್ಯವಸ್ಥೆಯಿಂದ ಭಾರತವನ್ನು ಹೊರಗಿಟ್ಟಿರುವ ಅಮೆರಿಕದ ತೀರ್ಮಾನದ ಬಗ್ಗೆಯೂ ಪ್ರಸ್ತಾಪಿಸಲಿ, ಈ ಮೊದಲು ಯಾವುದೇ ತೆರಿಗೆ ಇಲ್ಲದೆ ತೆರಿಗೆ ಮುಕ್ತವಾಗಿ ಭಾರತದ ಹಲವು ಸರಕುಗಳನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿತ್ತು. ಈಗ ಜಿಎಸ್‌ಪಿ ವ್ಯವಸ್ಥೆಯಿಂದ ಭಾರತವನ್ನು ಹೊರಗಿಟ್ಟಿರುವ ಟ್ರಂಪ್ ಸರ್ಕಾರದ ಭಾರತೀಯ ರಫ್ತುದಾರರಿಗೆ ತೊಂದರೆಯಾಗಿದೆ.

ಸುಮಾರು 5.6 ಬಿಲಿಯನ್ ಸರಕುಗಳು ಅಮೆರಿಕಕ್ಕೆ ಜಿಎಸ್‌ಪಿಯಡಿ ರಫ್ತಾಗುತ್ತಿತ್ತು. ಅದರಲ್ಲೂ ಆಭರಣ, ಅಕ್ಕಿ, ಚರ್ಮ, ಜೆಮ್ಸ್, ಚರ್ಮದ ಉತ್ಪನ್ನಗಳು ಈ ಜಿಎಸ್‌ಪಿ ಪಟ್ಟಿಯಲ್ಲಿದ್ದವು ಎಂದು ಅವರು ಟ್ವಿಟ್ಟರ್‌ನಲ್ಲಿ ಪ್ರಸ್ತಾಪಿಸಿ ಇದರ ಬಗ್ಗೆಯೂ ಮೋದಿ ಅವರು ದನಿ ಎತ್ತಬೇಕು, ಮೊದಲಿನಂತೆ ಜಿಎಸ್‌ಪಿಗೆ ಭಾರತವನ್ನು ಸೇರ್ಪಡೆ ಮಾಡಿ ಎಂದು ಪ್ರಧಾನಿ ಮೋದಿ ಒತ್ತಾಯಿಸುತ್ತಾರೆ ಎಂಬ ವಿಶ್ವಾಸವನ್ನೂ ಕಾಂಗ್ರೆಸ್‌ನ ವಕ್ತಾರರು ವ್ಯಕ್ತಪಡಿಸಿದ್ದಾರೆ.

ಈ ಮೊದಲು ಭಾರತ ಇರಾನ್‌ನಿಂದ 90 ದಿನಗಳ ನಂತರ ಹಣ ಪಾವತಿಸುವ ಸಾಲ ವ್ಯವಸ್ಥೆಯಡಿ ಕಚ್ಛಾ ತೈಲವನ್ನು ತರಿಸಿಕೊಳ್ಳುತ್ತಿತ್ತು. ಅಮೆರಿಕ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿದ ನಂತರ ಭಾರತ ಇರಾನ್‌ನಿಂದ ಕಡಿಮೆ ಬೆಲೆಯಲ್ಲಿ ತರಿಸಿಕೊಳ್ಳುತ್ತಿದ್ದ ಕಚ್ಛಾ ತೈಲವನ್ನು ಖರೀದಿ ಮಾಡುವುದನ್ನು ನಿಲ್ಲಿಸಿದೆ. ಇದರಿಂದ ಭಾರತದಲ್ಲಿ ತೈಲ ಬೆಲೆಗಳು ಏರಿವೆ. ಇದನ್ನೂ ಮೋದಿ ಅವರು ಅಮೆರಿಕದ ಅಧ್ಯಕ್ಷರ ಬಳಿ ಪ್ರಸ್ತಾಪಿಸಿ ಮೊದಲಿನಂತೆ ಕಡಿಮೆ ಬೆಲೆಗೆ ತೈಲ ತರಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.

ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯುವ `ನಮಸ್ತೆ ಟ್ರಂಪ್’ ಕಾರ್ಯಕ್ರಮದ ಬಗ್ಗೆಯೂ ಪ್ರಶ್ನಿಸಿರುವ ಸುರ್ಜೆವಾಲಾ, ಈ ಕಾರ್ಯಕ್ರಮವನ್ನು ಆಯೋಜಿಸಿರುವವರು ಯಾರು? ಯಾವಾಗ ಟ್ರಂಪ್ ಅವರಿಗೆ ಆಹ್ವಾನ ನೀಡಲಾಗಿತ್ತು ಎಂದು ವ್ಯಂಗ್ಯವಾಗಿವಾಡಿದ್ದಾರೆ.

ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿರುವುದಕ್ಕೆ ಕಾಂಗ್ರೆಸ್‌ನ ಲೋಕಸಭೆಯ ನಾಯಕ ಅಧೀರ್ ರಂಜನ್ ಚೌಧರಿ, ಈಗಾಗಲೇ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Leave a Comment