ಅಮೃತ ಸರೋವರ: ತೊಗರಿಕಾಳಿನಲ್ಲಿ ಶಿವಲಿಂಗ

ಕಲಬುರಗಿ ಫೆ 19: ನಗರದ ಸೇಡಂ ರಸ್ತೆ ಗೀತಾನಗರದ  ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಅಮೃತ ಸರೋವರ ರಿಟ್ರೀಟ್ ಸೆಂಟರ್‍ನಲ್ಲಿ  ಫೆಬ್ರವರಿ 21 ರಂದು ಮಹಾ ಶಿವರಾತ್ರಿಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು  ಬಿ.ಕೆ ವಿಜಯಾ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಸಂಜೆ 5 ಗಂಟೆಗೆ ಸಿಯುಕೆ ಕುಲಪತಿ ಪ್ರೊ ಎಚ್.ಎಂ ಮಹೇಶ್ವರಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಿವನ ಕುರಿತಾದ ನೃತ್ಯರೂಪಕ, ಹಾಡು,ವಿಶೇಷ ಪ್ರವಚನ ನಡೆಯಲಿವೆ.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವದು.

ತೊಗರಿಕಾಳಿನಲ್ಲಿ ಶಿವಲಿಂಗ:

ಅಮೃತ ಸರೋವರದ ಆವರಣದಲ್ಲಿ ಶಿವರಾತ್ರಿಯ ಅಂಗವಾಗಿ ಏಳು ಅಡಿಯ ವೇದಿಕೆ ಮೇಲೆ 18 ಅಡಿ ಎತ್ತರದ  ಶಿವಲಿಂಗವನ್ನು ತೊಗರಿಕಾಳಿನಿಂದ ನಿರ್ಮಿಸಲಾಗುತ್ತಿದ್ದು ಈ ಸಲದ ವಿಶೇಷ ಆಕರ್ಷಣೆಯಾಗಲಿದೆ. 3 ಕ್ವಿಂಟಾಲ್ ತೊಗರಿ ಕಾಳನ್ನು ಶಿವಲಿಂಗ ನಿರ್ಮಾಣಕ್ಕೆ ಬಳಸಲಾಗಿದೆ. ಶಿವಲಿಂಗ ಪ್ರತಿಷ್ಠಾಪನೆಯ ವೇದಿಕೆಗೆ ಆಕರ್ಷಕ  ಶಿಲ್ಪಗಳ ಪುರಾತನ ದೇವಾಲಯದ ರೂಪ ನೀಡಲಾಗಿದೆ ಇಂಜಿನೀಯರ್ ಮನೋಜ್ ಅವರು ನಿರ್ಮಾಣ ವಿನ್ಯಾಸ ಮಾಡಿದ್ದಾರೆ.ಶಿವರಾತ್ರಿಯ ನಂತರ ಶಿವಲಿಂಗಕ್ಕೆ ಬಳಕೆಯಾದ ತೊಗರಿ ಕಾಳನ್ನು ಆಹಾರಕ್ಕಾಗಿ ಉಪಯೋಗಿಸಲಾಗುವದು.

ವಿಶೇಷ ಅಲಂಕಾರ:

ಇಲ್ಲಿರುವ 12 ಜ್ಯೋತಿರ್ಲಿಂಗಗಳಿಗೆ ವಿಶೇಷವಾಗಿ ಅಲಂಕರಿಸುವ ಸಿದ್ಧತೆಗಳು ನಡೆದಿವೆ. ಒಂದೊಂದು ಲಿಂಗಕ್ಕೆ ವಿವಿಧ ಸಾಮಗ್ರಿಗಳನ್ನು ಬಳಸಿ ಅಲಂಕರಿಸಲಾಗುತ್ತಿದೆ. ಹಣತೆಗಳು, ಸಿಂಪೆ,ಜೋಳ ಮತ್ತು ಜೋಳದ ತೆನೆ, ಒಣಹಣ್ಣು,ಹೂವು, ರೂಪಾಯಿ ನೋಟುಗಳು,ರುದ್ರಾಕ್ಷಿ, ಹವಳ, ಮುತ್ತುಗಳನ್ನು ಬಳಸಿ ಶೃಂಗಾರಿಸಲಾಗುತ್ತಿದೆ.ಇದಕ್ಕಾಗಿ ಒಂದು ವಾರದಿಂದ ಸಿದ್ಧತೆಗಳು ನಡೆಯುತ್ತಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಕೆ ಪ್ರೇಮ್, ಬಿಕೆ ಶಿವಲೀಲಾ,ಶರಣಬಸಪ್ಪ ಹೀರಾ,ಉದಯಕುಮಾರ ಜೇವರಗಿ ಉಪಸ್ಥಿತರಿದ್ದರು..

Leave a Comment