ಅಮೀರ್ ಪರಾರಿ, ಪೊಲೀಸರ ಹುಡುಕಾಟ

ನವದೆಹಲಿ, ಏ. ೨- ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲಿಘಿ ಜಮಾತ್ ಇ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಮಾವೇಶದ ರೂವಾರಿ ಮೌಲಾನಾ ಸಾದ್ ಕಂದಾಲ್ವಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬೇಟೆಯಾಡುತ್ತಿದ್ದಾರೆ.

ಈಗಾಗಲೇ ಸಾದ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಅವರ ಪತ್ತೆ ಕಾರ್ಯದಲ್ಲಿ ದೆಹಲಿ ಪೊಲೀಸರು ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾದ್ ಅವರ ಸಂಬಂಧಿಕರು ಹಾಗೂ ಅವರ ನಿವಾಸಗಳಿಗೆ ಭೇಟಿನೀಡಿರುವ ಪೊಲೀಸರು, ಸಾದ್‌ಗಾಗಿ ಎಲ್ಲಾಕಡೆ ಜಾಲಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಪೊಲೀಸರ ಅಪರಾಧ ವಿಭಾಗದ ತಂಡವೊಂದು ಎಲ್ಲಾ ಮಸೀದಿಗಳಿಗೆ ಮತ್ತು ದರ್ಗಾಗಳಿಗೆ ಭೇಟಿಕೊಟ್ಟು ಎಲ್ಲಾದರೂ ತಲೆಮರೆಸಿಕೊಂಡಿರಬಹುದು ಎಂಬ ಗುಮಾನಿ ಮೇಲೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ಅವರನ್ನು ಮೊಬೈಲ್ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಎಲ್ಲಾ ದೂರವಾಣಿಗಳು ಸ್ವಿಚ್ ಆಫ್ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲೇ ಇರಲು ಸೂಚನೆ
ಈ ನಡುವೆ ತಲೆಮರೆಸಿಕೊಂಡಿರುವ ಧಾರ್ಮಿಕ ಸಮಾವೇಶದ ರೂವಾರಿ ಮೌಲಾನಾ ಸಾದ್ ಕಂದಾಲ್ವಿ 2ನೇ ಆಡಿಯೋ ಬಿಡುಗಡೆ ಮಾಡಿದ್ದು, ದೆಹಲಿಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಭಕ್ತರು ಮನೆಯಲ್ಲಿಯೇ ಉಳಿಯುವಂತೆ ಮನವಿ ಮಾಡದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಲಾಕ್ ಡೌನ್ ನಿಯಮವನ್ನು ಪಾಲಿಸಬೇಕು. ಕೂಡಲೇ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ, ಅವರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ವೈದ್ಯರ ಸಲಹೆಯಂತೆ ತಾವು ಐಸೋಲೇಷನ್‌ನಲ್ಲಿ ಇರುವುದಾಗಿ ಧ್ವನಿಮುದ್ರಿಕೆಯಲ್ಲಿ ಹೇಳಿಕೊಂಡಿರುವ ಅವರು, ತಮ್ಮ ಅನುಯಾಯಿಗಳು ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಿಜಾಮುದ್ದೀನ್ ಧಾರ್ಮಿಕ ಸಮಾವೇಶವೇ ಕೊರೊನಾ ಸೋಂಕು ಹರಡಲು ಕೇಂದ್ರಸ್ಥಾನವಾಗಿದೆ ಎಂಬ ಆತಂಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮೂಡಿದೆ.

Leave a Comment