ಅಮಿತಾಬ್ ತೀವ್ರ ಅಸ್ವಸ್ಥ, ಅಭಿಮಾನಿಗಳಿಗೆ ಆತಂಕ

(ನಮ್ಮ ಪ್ರತಿನಿಧಿಯಿಂದ)

ಮುಂಬೈ, ಮಾ. ೧೩- `ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರೀಕರಣಕ್ಕಾಗಿ ಜೋಧ್‌ಪುರದಲ್ಲಿರುವ ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ತೀವ್ರ

ಅನಾರೋಗ್ಯಕ್ಕೊಳಗಾಗಿದ್ದು, ಮುಂಬೈನಿಂದ ವೈದ್ಯರ ತಂಡ ಚಾರ್ಟರ್ ವಿಮಾನದಲ್ಲಿ ಜೋಧ್‌ಪುರಕ್ಕೆ ತೆರಳಿರುವುದು ಅಭಿಮಾನಿಗಳಲ್ಲಿ ಆತಂಕಕ್ಕೆಡೆ ಮಾಡಿದೆ.

ಜೋಧ್‌ಪುರದ ಹೋಟೆಲ್‌ನಲ್ಲಿರುವ ಅಮಿತಾಬ್ ಬಚ್ಚನ್ ಅವರಿಗೆ ಅಲ್ಲಿಯೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಹೋಟೆಲ್ ಸುತ್ತಮುತ್ತಲ ಪ್ರದೇಶದಿಂದ ಮಾಧ್ಯಮದವರನ್ನು ದೂರ ಇಟ್ಟಿರುವುದು ಮತ್ತಷ್ಟು ಅಭಿಮಾನಿಗಳನ್ನು ಆತಂಕಕ್ಕೊಳಗಾಗುವಂತೆ ಮಾಡಿದೆ.

75 ವರ್ಷದ ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ವದಂತಿಗಳು ಕೇಳಿ ಬರುತ್ತಿದ್ದವು. ಇಂದೂ ಕೂಡ ಅಮಿತಾಬ್ ಬಚ್ಚನ್ ಈಡಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ವೈದ್ಯರ ತಂಡ, ಅಮಿತಾಬ್ ಬಚ್ಚನ್ ಆರೋಗ್ಯ ಸ್ಥಿರವಾಗಿದೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

`ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರೀಕರಣಕ್ಕಾಗಿ ರಾಜಸ್ತಾನದ ಜೋಧ್‌ಪುರ್‌ನ ಐತಿಹಾಸಿಕ ಕೋಟೆ ಮೆಗ್ರಾನ್ ಘರ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಅಮಿತಾಬ್ ಬಚ್ಚನ್ ಅನಾರೋಗ್ಯಕ್ಕೊಳಗಾಗಿದ್ದಾರೆ.

ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರಲ್ಲಜೆ ಅಮೀರ್ ಖಾನ್, ಫಾತೀಮಾ ಸನಾಶೇಖ್, ಕತ್ರಿನಾ ಕೈಫ್ ಸೇರಿದಂತೆ ಮತ್ತಿತರ ಕಲಾವಿದರು ನಟಿಸುತ್ತಿದ್ದಾರೆ.

ವಿಜಯ್ ಕೃಷ್ಣ ಆಚಾರ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, 2018ರ ದೀಪಾವಳಿಗೆ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ.

Leave a Comment