ಅಮರಗೋಳದ ಗೌಡರ 10ನೇ ಪುಣ್ಯಸ್ಮರಣೋತ್ಸವ

ನವಲಗುಂದ, ಸೆ 5- ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿದ ನಂತರ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಹುಬ್ಬಳ್ಳಿ ಹಾಗೂ ನವಲಗುಂದ ಪ್ರದೇಶದಲ್ಲಿ `ಅಮರಗೋಳದ ಗೌಡ’ರೆಂದೇ ಕರೆಸಿಕೊಳ್ಳುತ್ತಿದ್ದ ಲಿಂ. ಬಸನಗೌಡ ಪಾಟೀಲ ಮುನೇನಕೊಪ್ಪ ಅವರು ಕಣ್ಮರೆಯಾಗಿ 10 ವರ್ಷ ಸಂದಿದ್ದು ಈ ಹಿನ್ನೆಲೆಯಲ್ಲಿ ಅಮರಗೋಳದಲ್ಲಿ ದಿ.6 ರಂದು ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜನತೆಯ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಮಾನವೀಯತೆಯ ಪ್ರತಿರೂಪವಾಗಿ ಬದುಕು ಸವೆಸಿದ ತಮ್ಮ ತೀರ್ಥರೂಪರ ಪ್ರತಿ ಪುಣ್ಯಸ್ಮರಣೆ ಸಂದರ್ಭದಲ್ಲೂ ವಿವಿಧ ಸಂಘ ಸಂಸ್ಥೆಗಳಿಗೆ, ಶಾಲೆಗಳಿಗೆ, ಮಠ ಮಂದಿರಗಳಿಗೆ, ಬಡಮಕ್ಕಳ ಶಿಕ್ಷಣಕ್ಕೆ ಪುತ್ರ, ನವಲಗುಂದ ಕ್ಷೇತ್ರದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಬಸನಗೌಡ ಪಾಟೀಲ ಸ್ಮಾರಕ ಪ್ರತಿಷ್ಠಾನದ ಮೂಲಕ ನೆರವು ನೀಡುತ್ತ ಬಂದಿದ್ದಾರೆ.
ಪ್ರಸಕ್ತ ವರ್ಷ ನವಲಗುಂದ ವಕೀಲರ ಸಂಘಕ್ಕೆ 1 ಲಕ್ಷ ರೂ. ದೇಣಿಗೆ, ನವಲಗುಂದದ ಗುರುಕುಲ ಶಿಕ್ಷಣ ಸಂಸ್ಥೆ, ಬಾಗಿ ಪ್ರಾಥಮಿಕ ಶಾಲೆ, ನಾಗಲಿಂಗೇಶ್ವರ ಶಿಕ್ಷಣ ಸಂಸ್ಥೆ, ಬಳ್ಳೂರ ಪ್ರಾಥಮಿಕ ಶಾಲೆ, ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನ ಟ್ರಸ್ಟ್‍ಗೆ ತಲಾ 50 ಸಾವಿರ ರೂ. ಆರ್ಥಿಕ ಸಹಾಯ, ನವಲಗುಂದ ಸಾಹಿತ್ಯ ಪರಿಷತ್‍ಗೆ 25 ಸಾವಿರ ರೂ. ನೆರವು ಅಲ್ಲದೇ ಅಮರಗೋಳದ ಸರ್ಕಾರಿ ಶಾಲಾ ಮಕ್ಕಳಿಗೆ ಬಟ್ಟೆ ವಿತರಿಸಲಾಗುವುದು.
ಬಸನಗೌಡರ ಹಿರಿಯ ಪುತ್ರ ಡಾ. ಮಲ್ಲನಗೌಡರು ವೈದ್ಯ ಸೇವೆಯಿಂದ ನಿವೃತ್ತಿಯಾಗಿ ಈಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ದ್ವಿತೀಯ ಪುತ್ರ ಹನುಮಂತಗೌಡರು ಪ್ರಗತಿಪರ ರೈತರಾಗಿದ್ದಾರೆ. ಶಂಕರಪಾಟೀಲ ತೃತೀಯ ಪುತ್ರರಾಗಿದ್ದು ದ್ವಿತೀಯ ಬಾರಿಗೆ ನವಲಗುಂದ ಶಾಸಕರಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಗುರಿಯೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ.
ಕಳೆದ ಬಾರಿ ಅಮರಗೋಳ ಗ್ರಾಮದ 2000 ಜನರಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಿಮಾ ಸೌಲಭ್ಯ ಕಲ್ಪಿಸಲಾಗಿತ್ತಲ್ಲದೇ ನವಿಲುಗರಿ ಸಾಂಸ್ಕೃತಿಕ ವೇದಿಕೆಗೆ ಹಾಗೂ ಕಳ್ಳಿಮಠ ಓಣಿಯ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ತಲಾ 50 ಸಾವಿರ ರೂ. ನೆರವು ನೀಡಲಾಗಿತ್ತು.

Leave a Comment