‘ಅಭಿವ್ಯಕ್ತಿ ಸ್ವಾತಂತ್ರ್ಯ್ರ ಎತ್ತಿಹಿಡಿಯಲು ಮಾಧ್ಯಮ ಅಗತ್ಯ’

ಮಂಗಳೂರು, ಜ.೬- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಮಾಧ್ಯಮಗಳು ಅತ್ಯಗತ್ಯ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಭಿಪ್ರಾಯಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿನ್ನೆ ಉರ್ವ ಚರ್ಚ್ ಸಭಾಂಗಣದಲ್ಲಿ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕರಿಗೆ ಮಂಗಳೂರು ಪ್ರೆಸ್ ಕ್ಲಬ್ ನ ವರ್ಷದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ದಿನವಿಡೀ ಸಮಾಜದ ಆಗುಹೋಗುಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಮಾಧ್ಯಮ ಮಿತ್ರರು ತಮ್ಮಲ್ಲಿರುವ ವಿಭಿನ್ನ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಆಯೋಜಿಸುವ ಈ ಕಾರ್ಯಕ್ರಮ ಅತ್ಯುತ್ತಮ. ಅದಕ್ಕಿಂತಲೂ ಮುಖ್ಯವಾಗಿ ಸಾಮಾನ್ಯ ರೈತನೊಬ್ಬ, ಸರಕಾರದ ನೆರವಿಲ್ಲದೆ, ಯಾವ ರೀತಿಯಲ್ಲಿ ಸಾಧನೆಯನ್ನು ಮಾಡಬಲ್ಲ ಎಂಬುದನ್ನು ಸಮಾಜಕ್ಕೆ ತಿಳಿಸುವುದಲ್ಲದೆ, ಆತನಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಮಹತ್ವದ ಕಾರ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಯಾವುದೇ ಗ್ಯಾರಂಟಿಯೇ ಇಲ್ಲದಿದ್ದರೂ ಸಾಧಿಸಬೇಕೆಂಬ ಹಠದೊಂದಿಗೆ ಸ್ವಾಭಿಮಾನವನ್ನು ಬಿಡದೆ ಸಾಧನೆ ಮಾಡಿದ ಮಹಾಲಿಂಗ ನಾಯ್ಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಪ್ರಶಸ್ತಿಗೆ ಸಂದ ಗೌರವ ಎಂದು ಶ್ಲಾಘಿಸಿದರು. ಪತ್ರಕರ್ತ ಮುಹಮ್ಮದ್ ಆರಿಫ್ ಪಡುಬಿದ್ರೆ ಪ್ರಶಸ್ತಿ ವಿಜೇತ ಅಮೈ ಮಹಾಲಿಂಗ ನಾಯ್ಕರ ಪರಿಚಯ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರವಿಚಂದ್ರ ಭಟ್ ಮತ್ತು ವಿಜಯ್ ಕೋಟ್ಯಾನ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಸಾಧಕರಿಗೆ ಸನ್ಮಾನ: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಜಗನ್ನಾಥ ಶೆಟ್ಟಿ ಬಾಳ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿನಕರ ಇಂದಾಜೆ, ಎರಡು ಪಿಎಚ್‌ಡಿ ಪದವಿ ಪಡೆದ ಮತ್ತು ಶಂಕರ ಪುರಸ್ಕಾರ ಪಡೆದಿರುವ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ, ಜೇಸಿ ಔಟ್ ಸ್ಟಾಂಡಿಂಗ್ ಯಂಗ್ ಪರ್ಸನ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ದಯಾನಂದ ಕುಕ್ಕಾಜೆ, ಜನಪದೋತ್ಸವ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಗೋವಿಂದರಾಜ ಜವಳಿ, ತಿರುಮಲ ತಾತಾಚಾರ್ಯ ಶರ್ಮ ಪ್ರಶಸ್ತಿ ವಿಜೇತ ಜಿತೇಂದ್ರ ಕುಂದೇಶ್ವರ, ರಾಜ್ಯ ಮಟ್ಟದ ಸಾಂಘಿಕ ಪ್ರಶಸ್ತಿ ವಿಜೇತ ಮೌನೇಶ್ ವಿಶ್ವಕರ್ಮ, ಛಾಯಾಚಿತ್ರ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಛಾಯಾಗ್ರಾಹಕ ಅಪುಲ್ ಇರಾ, ಅರೆಹೊಳೆ ಪ್ರತಿಷ್ಠಾನದ ಪ್ರಶಸ್ತಿ ವಿಜೇತ ಲಕ್ಷ್ಮೀ ಮಚ್ಚಿನ, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಗದೀಶ್ಚಂದ್ರ ಅಂಚನ್ , ದಿವಾಕರ ಪದ್ಮುಂಜೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪತ್ರಿಕಾ ಭವನ ಅಧ್ಯಕ್ಷ ಕೆ. ಆನಂದ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎನ್. ಪುಷ್ಪರಾಜ್, ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತ ಮನೋಹರ್ ಪ್ರಸಾದ್‌ಗೆ ಸನ್ಮಾನ: ಪತ್ರಿಕಾ ರಂಗದಲ್ಲಿ ಅನನ್ಯ ಸೇವೆಗಾಗಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರನ್ನು ದ.ಕ.ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಸನ್ಮಾನಿಸಿದರು. ಹಿರಿಯ ಪತ್ರಕರ್ತ ರಘುರಾಮ್ , ವಿಜಯ ಕರ್ನಾಟಕದ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್ ಉಪಸ್ಥಿತರಿದ್ದರು.
ಇದೇ ವೇಳೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗ್ರೀಷ್ಮಾ ಶೆಟ್ಟಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಆತ್ಮಭೂಷಣ್ ಅವರು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಪತ್ರಕರ್ತ ದಯಾನಂದ ಕುಡುಪು ಮತ್ತು ಬಳಗದಿಂದ ಸ್ಯಾಕ್ಯೋಫೋನ್ ವಾದನ ನಡೆಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
ಪತ್ರಕರ್ತರಿಂದ ಯಕ್ಷಗಾನ ನರಕಾಸುರ ಮೋಕ್ಷ , ಮೈಂದ -ದ್ವಿವಿದ ಕಾಳಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Comment