ಅಭಿವೃದ್ಧಿಗೆ ಸಹಕರಿಸುವಂತೆ ಪುರಸಭೆ ಸದಸ್ಯರಿಗೆ ಶಾಸಕರ ಮನವಿ

ಕುಣಿಗಲ್, ಜ. ೧೨- ಪುರಸಭೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಪಟ್ಟಣದಲ್ಲಿ ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ಚರಂಡಿ, ಶೌಚಾಲಯ, ನಿವೇಶನ ಅಭಿವೃದ್ಧಿಗೆ ನನ್ನ ಜೊತೆ ಕೈ ಜೋಡಿಸುವಂತೆ ಶಾಸಕ ಡಾ ರಂಗನಾಥ್ ಸದಸ್ಯರಿಗೆ ಮನವಿ ಮಾಡಿದರು.

ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷರಾದ ನಳಿನಾ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಶಾಸಕ ಡಾ ರಂಗನಾಥ್ ಮಾತನಾಡಿ, ಪಟ್ಟಣದಲ್ಲಿ ಈಗಾಗಲೇ 10 ವಾರ್ಡ್‌ಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯವನ್ನು ಪರಿಶೀಲನೆ ಮಾಡಿದ್ದೇನೆ. ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಯಾವುದೇ ಸಮರ್ಪಕವಾದ ಅಭಿವೃಧ್ಧಿ ಕಾಣದೆ,ಜನತೆ ನರಕ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪರಿಹಾರ ಕಂಡುಕೊಳ್ಳದೇ ಇರುವ ಬಗ್ಗೆ ಶಾಸಕರು ಸದಸ್ಯರ ಮೇಲೆ ಗರಂ ಆದ  ಘಟನೆ ನಡೆಯಿತು.

ಕೆಲವು ಸದಸ್ಯರು ಕೊಳವೆ ಬಾವಿ, ಬೀದಿ ದೀಪ ಟೆಂಡರ್ ಸಂಬಂಧ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು  ಅವ್ಯವಹಾರ ನಡೆಸಿದ್ದಾರೆ ಎಂದು ಕೆಲವು ಸದಸ್ಯರು ಸಭೆಯಲ್ಲಿ ಗದ್ದಲ ಉಂಟು ಮಾಡಿ ಜೋರು ಧ್ವನಿಯಲ್ಲಿ ಮಾತನಾಡಿದರು. ಶಾಸಕರು ಎಷ್ಟೇ ಸಮಾಧಾನಪಡಿಸಿದರೂ ಸುಮ್ಮನಿರದ ಸದಸ್ಯರನ್ನ ಜೋರು ಧ್ವನಿಯಲ್ಲೇ ಶಾಸಕ ಡಾ ರಂಗನಾಥ್ ಸುಮ್ಮನಿರುವಂತೆ ಗರಂ ಆಗಿ ಗದರಿಸಿದ ಘಟನೆ ನಡೆಯಿತು.ಇದಕ್ಕೂ ಮುನ್ನ  ಪಕ್ಷ ಭೇದ ಮರೆತು ಸದಸ್ಯರಾದ ಕೆ.ಎಲ್.ಹರೀಶ್, ರಾಮು, ಪಾಪಣ್ಣ, ಈ.ಮಂಜು, ಅನ್ಸರ್ ಪಾಷ, ಜಗದೀಶ್ ಸೇರಿದಂತೆ ಅನೇಕ ಸದಸ್ಯರು ಅಧ್ಯಕ್ಷರಾಧ ನಳಿನಾ, ಮುಖ್ಯಾಧಿಕಾರಿ ರಮೇಶ್ ಅವರ ಆಡಳಿತ ವೈಖರಿ ಏಕಪಕ್ಷೀಯವಾಗಿ ಸದಸ್ಯರ ಗಮನಕ್ಕೆ ತರದೇ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡು ಸದಸ್ಯರ ಹಕ್ಕಿಗೆ ಚ್ಯುತಿ ತಂದಿರುತ್ತಾರೆ. ಕಳೆದ 8 ತಿಂಗಳಿಂದ ಯಾವುದೇ ಜಮಾ ಖರ್ಚು ಮಾಡಿರುವುದಿಲ್ಲ ಎಂದು ಶಾಸಕರಿಗೆ ದೂರು ಸಲ್ಲಿಸಿದರು.

ಪುರಸಭೆಯ ಪರಿಸರ ಇಂಜಿನಿಯರ್ ಸದಸ್ಯರಿಗೆ ಗೌರವ ನೀಡುತ್ತಿಲ್ಲ, ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ನನ್ನನ್ನು ಬೇಕಾದರೆ ವರ್ಗಾವಣೆ ಮಾಡಿ ಎಂದು ಮುಖ್ಯಾಧಿಕಾರಿಯನ್ನೇ  ಬೆದರಿಸುತ್ತಾರೆ ಎಂದು ಸದಸ್ಯರು ದೂರಿದಾಗ, ಶಾಸಕರು ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ನೀಡದಿರುವ ಈ ಅಧಿಕಾರಿಗೆ ನೋಟಿಸ್ ನೀಡಿ ಅಮಾನತ್ತಿಗೆ ಶಿಫಾರಸ್ಸು ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಚಿವ ಡಿ.ಕೆ.ಶಿವಕುಮಾರ್, ಸಂಸದರಾದ ಡಿ.ಕೆ.ಸುರೇಶ್  ಹಾಗೂ ಶಾಸಕನಾದ ನಾನು ಪ್ರಾಮಾಣಿಕವಾಗಿ ಕನಕಪುರ ಮಾದರಿಯಲ್ಲಿ ಕುಣಿಗಲ್ ಪಟ್ಟಣವನ್ನ ಅಭಿವೃದ್ಧಿ ಮಾಡಬೇಕೆಂದು ಕನಸು ಹೊಂದಿದ್ದೇವೆ, ಎಲ್ಲರೂ ಸಹಕಾರ ನೀಡಬೇಕೆಂದರು.

ಸಭೆಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಸಹಯೋಗದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗ ಹಸ್ತಾಂತರ ಮಾಡಲು ಸಭೆಯಲ್ಲಿ ಸದಸ್ಯರು ಒಮ್ಮತದಿಂದ ತೀರ್ಮಾನ ಕೈಗೊಂಡು ಬಿದನಗೆರೆ ಬಳಿ 14 ಎಕರೆ ಸರ್ಕಾರಿ ಜಮೀನಿನಲ್ಲಿ ಬಡವರಿಗೆ ನಿವೇಶನ ನೀಡಲು ಸಭೆ ಅನುಮತಿ ನೀಡಿತು.ಒಳಚರಂಡಿ ಕಾಮಗಾರಿ ಕಳಪೆಯಿಂದ ಕೂಡಿರುವುದನ್ನ ತನಿಖೆ ಮಾಡುವಂತೆ ಶಾಸಕರು ಸೂಚಿಸಿ ಹೆಚ್ಚಿನ ಅನುದಾನಕ್ಕೆ ಪರಿಷ್ಕೃತ ಅಂದಾಜು ಪಟ್ಟಿಯನ್ನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ನಳೀನಾ, ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ಶಂಕರ್, ಸರಸ್ವತಿ, ಐಶಾಬೀ, ರಂಗಸ್ವಾಮಿ, ಪಾಪಣ್ಣ, ಮುಖ್ಯಾಧಿಕಾರಿ ರಮೇಶ್ ಉಪಸ್ಥಿತರಿದ್ದರು.

Leave a Comment