ಅಭಿಮಾನಿಗಳಲ್ಲಿ ರಾಧಿಕಾ ಪಂಡಿತ್ ಕ್ಷಮೆ

ಬೆಂಗಳೂರು, ಮಾ ೮- ಈ ವರ್ಷ ನಿಮ್ಮ ಜೊತೆ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿಲ್ಲ ಎಂದು ನಟಿ ರಾಧಿಕಾ ಪಂಡಿತ್ ಅವರು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಇಂದು ತಮ್ಮ ೩೬ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ಬೇರೆ ಜಾಗಗಳಿಂದ, ಬೇರೆ ಊರುಗಳಿಂದ ನನ್ನನ್ನು ಭೇಟಿ ಮಾಡಿ ವಿಶ್ ಮಾಡಲು ಬರುತ್ತೀರಾ ಎಂದು ನನಗೆ ಗೊತ್ತು. ಕಳೆದ ವರ್ಷ ಕೂಡ ಮಿಸ್ ಆಯ್ತು. ಈ ವರ್ಷ ದಯವಿಟ್ಟು ಯಾರು ಬೇಜಾರು ಮಾಡಿಕೊಳ್ಳಬೇಡಿ, ಬೈಕೋಬೇಡಿ” ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ. ಈ ವರ್ಷ ಕೂಡ ನಾನು ನನ್ನ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಏಕೆಂದರೆ ನನಗೆ ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಹಾಗಾಗಿ ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಸ್ವಲ್ಪ ಕಷ್ಟ ಎಂದಿದ್ದಾರೆ.
ಇದೇ ವೇಳೆ ನೀವು ಮಾಡುತ್ತಿರುವ ಮೆಸೇಜ್‌ಗಳು ಹಾಗೂ ಪ್ರೀತಿಯಿಂದ ಮಾಡುತ್ತಿರುವ ಕೆಲಸಗಳನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿದ್ದೇನೆ. ಎಲ್ಲಾ ಮೆಸೇಜ್‌ಗಳನ್ನು ಓದುತ್ತಿದ್ದೇನೆ, ಹಾಗೆಯೇ ರಿಪ್ಲೈ ಕೂಡ ಮಾಡುತ್ತೇನೆ. ನನಗೂ ಬೇಜಾರು ಆಗುತ್ತಿದೆ. ಯಾಕೆಂದರೆ ನನ್ನ ಹುಟ್ಟುಹಬ್ಬ ನಿಮ್ಮ ಜೊತೆ ಆಚರಿಸಿಲ್ಲ ಎಂದರೆ ಏನೋ ಅಪೂರ್ಣ ಎಂದು ಅನಿಸುತ್ತೆ. ಕಳೆದ ವರ್ಷ ಕೂಡ ಹುಟ್ಟುಹಬ್ಬ ಆಚರಿಸೋಕೆ ಆಗಿಲ್ಲ. ಮುಂದಿನ ವರ್ಷ ಭೇಟಿಯಾಗಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸೋಣ ಎಂದು ತಿಳಿಸಿದ್ದಾರೆ.
ನಾನು ಈ ವಿಡಿಯೋ ಏಕೆ ಮಾಡುತ್ತಿದ್ದೇನೆ ಎಂದರೆ, ನನ್ನ ಹುಟ್ಟುಹಬ್ಬದಂದು ದೂರದ ಊರಿನಿಂದ ಅಭಿಮಾನಿಗಳು ಬರುತ್ತಾರೆ. ಈ ಬಾರಿ ಕೂಡ ಅವರು ಬಂದು ನಿರಾಸೆ ಆಗುವುದು ನನಗೆ ಇಷ್ಟ ಇಲ್ಲ. ಹಾಗಾಗಿ ನಾನು ಈ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ನನ್ನ ಕುಟುಂಬಕ್ಕೆ ಸದಾ ಹೀಗೆ ಇರಲಿ. ಆದಷ್ಟು ಬೇಗ ಸಿಗೋಣ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

Leave a Comment