ಕೆ.ಆರ್.ಎಸ್ ಭರ್ತಿಗೆ 7 ಅಡಿ ಬಾಕಿ : ಅಪಾಯ ಮಟ್ಟದಲ್ಲಿ ಕಪಿಲೆ

ಮೈಸೂರು, ಜು.12- ರಾಜ್ಯಾದ್ಯಂತ ಅಬ್ಬರಿಸುತ್ತಿರುವ ಪುನರ್ವಸು ಮಳೆಯಿಂದ ಕಪಿಲೆ, ಕಾವೇರಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಕೆಆರ್ಎಸ್ ಜಲಾಶಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯ ತುಂಬಲು ಇನ್ನು ಕೇವಲ 7 ಅಡಿ ಮಾತ್ರ ಬಾಕಿ ಇದೆ.

ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ಥವ್ಯಸ್ತವಾಗಿದೆ. ಬಾಗಮಂಡಲ ಜಲಾವೃತವಾಗಿದ್ದು, ದ್ವೀಪದಂತಾಗಿದೆ. ಧಾರಾಕಾರ ಮಳೆ ಹಾಗೂ ಪ್ರಾಕೃತಿಕ ವಿಕೋಪಗಳ ಕಾರಣ ಕೊಡಗು ಜಿಲ್ಲಾಡಳಿತ ಇಂದೂ ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.

ಕೆಆರ್ ಎಸ್ ಜಲಾಶಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ 117 ಅಡಿಗೆ ದಾಟಿದೆ. ಜಲಾಶಯದ ಗರಿಷ್ಟ ಮಟ್ಟ 124.80 ಅಡಿಗಳಷ್ಟಿದ್ದು, ಜಲಾಶಯ ಭರ್ತಿಯಾಗಲು ಕೇವಲ 7 ಅಡಿ ಬಾಕಿ ಇದೆ.

ಮಡಿಕೇರಿಯಲ್ಲಿ ಬುಧವಾರ ಧಾರಾಕಾರವಾಗಿ ಸುರಿದ ಮಳೆಯಿಂದ ಪಾದಚಾರಿಗಳು, ಆಟೋ ಚಾಲಕರು, ಬೈಕ್ ಸವಾರರು ಪರದಾಡುವಂತಾಯಿತು. ಮಡಿಕೇರಿಯ ತಾಳ್ತ್‌ಮನೆ, ಕಡಗದಾಳು, ಬೋಯಿಕೇರಿ, ಕಾಟಕೇರಿ, ಗಾಳಿಬೀಡು ಸೇರಿದಂತೆ ವಿರಾಜಪೇಟೆ ತಾಲೂಕಿನ ಶ್ರೀಮಂಗಲ, ಬಿರುನಾಣಿ, ಟಿ.ಶೆಟ್ಟಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 87.30 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 110.66 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 58.40 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 92.85 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ 99.80, ನಾಪೋಕ್ಲು 101.20, ಸಂಪಾಜೆ 66.6 0, ಭಾಗಮಂಡಲ 175.04, ವಿರಾಜ ಪೇಟೆ ಕಸಬಾ 60.80, ಹುದಿಕೇರಿ 97, ಶ್ರೀಮಂಗಲ 109.40, ಪೊನ್ನಂಪೇಟೆ 26.20, ಅಮ್ಮತಿ 36, ಬಾಳೆಲೆ 21, ಸೋಮವಾರಪೇಟೆ ಕಸಬಾ 102.80, ಶನಿವಾರಸಂತೆ 123, ಶಾಂ ತಳ್ಳಿ 185.20, ಕೊಡ್ಲಿಪೇಟೆ 69.40, ಕುಶಾಲನಗರ 15.40, ಸುಂಟಿಕೊಪ್ಪ 61.30 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಬುಧವಾರದ ನೀರಿನ ಮಟ್ಟ 2857.45 ಅಡಿಗಳು, ನೀರಿನ ಒಳಹರಿವು 14973 ಕ್ಯೂಸೆಕ್, ಹೊರ ಹರಿವು ನದಿಗೆ 11938 ಕ್ಯೂಸೆಕ್, ನಾಲೆಗಳಿಗೆ 450 ಕ್ಯುಸೆಕ್ ಬಿಡಲಾಗುತ್ತಿದೆ.

ಬಿರುಕು ಬಿಟ್ಟ ಸೇತುವೆ

ವಿರಾಜಪೇಟೆ ತಾಲೂಕಿನ ಬಾಳಲೆ ಹಾಗೂ ನಿಟ್ಟೂರು ಗ್ರಾಮಗಳಿಗೆ ನೂತನವಾಗಿ ಲಕ್ಷ್ಮಣತೀರ್ಥ ನದಿಗೆ ನಿರ್ಮಿಸಲಾದ ಸಂಪರ್ಕ ಸೇತುವೆ ಕೆಲವು ದಿನ ಗೇರಿ, ಹುದಿಕೇರಿ ಇತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಸುರಿಯುತ್ತಿರುವ ಧಾರಾಕಾರ ಮಳೆಗೆ ಬಿರುಕು ಬಿಟ್ಟಿದೆ. ಈ ಮೊದಲು ಇದ್ದ ಸಣ್ಣ ಸೇತುವೆಯಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆ ನೂತನವಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಸಂಚಾರ ಆರಂಭಿಸಿ ಕೆಲವೆ ತಿಂಗಳಲ್ಲಿ ಬಿರುಕುಬಿಟ್ಟಿರುವುದು ಆಶ್ಚರ್ಯಕರವಾಗಿದೆ. ಸಂಬಂಧಪಟ್ಟವರು ಇತ್ತಕಡೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡದಿದ್ದಲ್ಲಿ ಸೇತುವೆಯ ಒಂದು ಭಾಗ ನೀರುಪಾಲಾಗುವುದರಲ್ಲಿ ಎರಡು ಮಾತಿಲ್ಲ.

ಭತ್ತದ ಗದ್ದೆಗಳು ಜಲಾವೃತ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಾಳಲೆ ಹಾಗೂ ನಿಟ್ಟೂರು ಭಾಗದ ನೂರಾರು ಎಕರೆ ಭತ್ತದಗದ್ದೆಗಳು ಜಲಾವೃತವಾಗಿವೆ. ಅಲ್ಲದೆ ಕಾನೂರು ಗ್ರಾಮದಲ್ಲಿ ನೂರಾರು ಎಕರೆ ಜಲಾವೃತವಾಗಿದ್ದು, ಬೆಳೆಗಾರರು ಪರದಾಡುವಂತಾಗಿದೆ. ಇನ್ನು ಎರಡು ದಿನಗಳು ಇದೇ ರೀತಿಯಲ್ಲಿ ವರುಣನ ಆರ್ಭಟ ಮುಂದುವರಿದರೆ ಕಾನೂರು, ಪೊನ್ನಂಪೇಟೆ ರಸ್ತೆಗಳಲ್ಲಿ ಸಂಪರ್ಕ ಕಡಿತವಾಗಲಿದೆ.

ತಲಕಾವೇರಿ, ತ್ರಿವೇಣಿ ಸಂಗಮದಲ್ಲಿ ವ್ಯಾಪಕ ಮಳೆ

ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ, ತ್ರಿವೇಣಿ ಸಂಗಮ, ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಐದು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ.

ಭಾಗಮಂಡಲ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ. ಬೋಟ್ ಬಳಸಿ ಅಲ್ಲಿನ ನಾಗರಿಕರಿಗೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಮಡಿಕೇರಿ-ಭಾಗಮಂಡಲ ಮಾರ್ಗದ ರಸ್ತೆಯಲ್ಲಿ ನೀರು ಹೆಚ್ಳಳವಾಗಿದೆ. ಭಾಗಮಂಡಲದಲ್ಲಿ ನುರಿತ ಈಜು ತಜ್ಞರು, ಗೃಹ ರಕ್ಷಕದಳದ ಸಿಬ್ಬಂದಿ ಮೊಕ್ಕಂ ಹೂಡಿದ್ದು, ಪ್ರವಾಹ ಹೆಚ್ಚಾದ ಸಂದರ್ಭದಲ್ಲಿ ಬೋಟ್ ಬಳಸಿ ಅಲ್ಲಿನ ಜನರು ಹಾಗೂ ಪ್ರವಾಸಿಗರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜನರ ಬದುಕು ದುಸ್ತರವಾಗಿದೆ. ಸಂಚಾರ ಹಾಗೂ ಜನಜೀವನ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಸುಗಮ ಸಂಚಾರ ಹಾಗೂ ಜನಜೀವನಕ್ಕೆ ಅಗತ್ಯ ಕ್ರಮಕೈಗೊಂಡಿದೆ.

ಶಾಲೆ-ಕಾಲೇಜುಗಳಿಗೆ ರಜೆ

ಜಿಲ್ಲೆಯಲ್ಲಿ ಭಾರಿ ಗಾಳಿ, ಮಳೆ ಮುಂದುವರಿದಿರುವುದರಿಂದ ಜಿಲ್ಲಾದ್ಯಂತ ಅಂಗನವಾಡಿ ಸೇರಿದಂತೆ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

ಹಾರಂಗಿ ಹಾಗೂ ಕಬಿನಿ ಜಲಾಶಯಗಳು ಈಗಾಗಲೇ ಭರ್ತಿಯಾಗಿ ಅಧಿಕ (50 ಸಾವಿರ ಕ್ಯೂಸೆಕ್) ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ 15-20 ದಿನಗಳಿಂದ ಕಬಿನಿ ಜಲಾಶಯ ಗರಿಷ್ಟ ಮಟ್ಟವನ್ನು ಕಾಯ್ದುಕೊಂಡಿವೆ. ಇಂದಿನ ನೀರಿನ ಮಟ್ಟ 2,282.22 ಅಡಿಗಳಷ್ಟಿದ್ದು, ಕಳೆದ ವರ್ಷ 2,263.75 ಅಡಿಯಷ್ಟು ನೀರಿತ್ತು. 2,326 ಕ್ಯೂಸೆಕ್ ನೀರು ಒಳ ಹರಿವು ಇದ್ದು, 2,000 ಕ್ಯೂಸೆಕ್ ಹೊರ ಹರಿವಿತ್ತು. ಕಳೆದ 9 ವರ್ಷದಲ್ಲಿ ಈ ಪ್ರಮಾಣದಲ್ಲಿ ನೀರು ಹರಿದು ಹೋಗಿರಲಿಲ್ಲ ಎಂಬುದು ನೀರಾವರಿ ತಜ್ಞರ ಅಭಿಮತವಾಗಿದೆ.

Leave a Comment