ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗಳಿಗೆ ಜೀವಾವಧಿ ಶಿಕ್ಷೆ

 

ಕಲಬುರಗಿ,ಅ.18-ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳಿಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ ಗ್ರಾಮದ ಖಾಜಪ್ಪ ಚೌಗಲೇ, ಬಾಳು ಚೌಗಲೇ ಮತ್ತು ಪರಶುರಾಮ ಗಾಡಿವಡ್ಡರ ಎಂಬುವವರು 2015ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದರು.

ಪ್ರಮುಖ ಆರೋಪಿ ಖಾಜಪ್ಪ ಚೌಗಲೇ ಬಾಲಕಿಯನ್ನು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಲಿಮಕಿಂಡಿ ಗ್ರಾಮದ ಸೀಮಾಂತರದ ಕಲ್ಲಿನ ಗಣಿಯಲ್ಲಿರುವ ಒಂದು ಮನೆಯಲ್ಲಿ ಇಟ್ಟು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಈ ವಿಷಯ ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಪಿಐ ಬಾಸು ಚವ್ಹಾಣ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪ ಎಸ್.ಅವರು ಆರೋಪಿಗಳಾದ ಖಾಜಪ್ಪ ಚೌಗಲೇ, ಬಾಳಪ್ಪ ಅಲಿಯಾಸ್ ಬಾಳು ಚೌಗಲೇ, ಪರಶುರಾಮ ರಾಜಪ್ಪ, ಲಕ್ಷ್ಮಣ ಭೋಗಪ್ಪ, ಶಾಂತಾಬಾಯಿ ಭೋಗಪ್ಪ ಮತ್ತು ಭೋಗಪ್ಪ ಯಲ್ಲಪ್ಪ ಅವರಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ನೊಂದ ಬಾಲಕಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ ರೂ.5 ಲಕ್ಷ ಪರಿಹಾರ ನೀಡುವಂತೆ ಮತ್ತು ದಂಡದ ಹಣದಲ್ಲಿಯು ಸಹ 3 ಲಕ್ಷ ರೂಪಾಯಿ ನೀಡಬೇಕೆಂದು ಆದೇಶಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (ಪೋಕ್ಸೋ) ಎಲ್.ವಿ.ಚಟ್ನಾಳಕರ್ ಅವರು ವಾದ ಮಂಡಿಸಿದ್ದರು.

Leave a Comment