ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

ನಂಜನಗೂಡು ಹೊರವಲಯದಲ್ಲಿ ದಾರುಣ ಘಟನೆ
ಮೈಸೂರು, ನ.17- ಬಡ ಕೂಲಿಕಾರ್ಮಿಕರ ಪುಟ್ಟ ಕಂದಮ್ಮನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಾಮುಕ ತನವನ್ನು ಮೆರೆದಿರುವ ಕಾಮ ಪಿಪಾಸುಗಳು ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಿನ್ನೆ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಡೆದಿದೆ.
ಪುಟ್ಟ ಗುಡಿಸಿಲಿನಲ್ಲಿದ್ದ ಒಬ್ಬಂಟಿ ಪುಟ್ಟ ಬಾಲಕಿಯನ್ನು ಗಮನಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ನಂಜನಗೂಡಿನ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಘಟನೆಯೊಂದು ನಡೆದಿದ್ದು ಜನತೆಯನ್ನು ಬೆಚ್ಚಿ ಬೀಳಿಸಿದೆ. ಕಡು ಬಡತನದ ಕುಟುಂಬದ ಪುಟ್ಟ ಬಾಲಕಿಯೋರ್ವಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ನಂಜನಗೂಡಿನ ಚಾಮಲಾಪುರದ ಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದು, ತಾಯಿ ರತ್ನಮ್ಮ ಮತ್ತು ತಂದೆ ಕುಮಾರ ಎಂಬವರ ಮೊದಲ ಪುತ್ರಿಯಾಗಿದ್ದ ಈಕೆಯೇ ಕಾಮಪಿಪಾಸುಗಳಿಗೆ ಬಲಿಯಾದ ದುರ್ದೈವಿ.
ಮೃತಳ ಪೋಷಕರು ನಂಜನಗೂಡಿನ ಕೈಗಾರಿಕಾ ಪ್ರದೇಶದ ಜನಿತ್ ಟೆಕ್ಸ್ಟೈಲ್ ಕಾರ್ಖಾನೆಯ ಬಳಿ ಪುಟ್ಟದಾದ ನಾಲ್ಕು ಚಕ್ರದ ಗಾಡಿಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು. ಈಕೆ ಮನೆಯ ಹಿರಿಯ ಮಗಳಾಗಿದ್ದಳು. ಪೋಷಕರು ಬೆಳಿಗ್ಗೆ ಸುಮಾರು 6 ಗಂಟೆಯಿಂದ ಪುಟ್ಟ ಗುಡಿಸಲು ಬಿಟ್ಟು ಹೋಟೆಲ್ ಬಳಿ ತೆರಳಿದರೆ ಬರುವುದು ಸಂಜೆ 6 ಗಂಟೆಯಾಗುತ್ತಿತ್ತು. ಗುಡಿಸಿಲಿನಲ್ಲಿ ಪುಟ್ಟ ಬಾಲಕಿ ಒಬ್ಬಳೇ ಇರುವುದನ್ನು ಹೊಂಚುಹಾಕಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದು ಕಾಮ ಪಿಶಾಚಿಗಳು ಪರಾರಿಯಾಗಿದ್ದಾರೆ. ಐದು ಗಂಟೆಯ ಸಮಯದಲ್ಲಿ ಗುಡಿಸಿಲಿನಲ್ಲಿ ಬಾಗಿಲು ತೆರೆದು ನೋಡಿದಾಗ ಪುಟ್ಟ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿರುವ ದೃಶ್ಯವನ್ನು ಕಂಡು ತಂದೆ ತಾಯಿ ಬೆಚ್ಚಿ ಬಿದ್ದಿದ್ದಾರೆ.
ಎಷ್ಟೇ ಕೂಗಾಡಿದರೂ ಕಣ್ಣು ತೆರೆಯದೆ ಮೃತ ಬಾಲಕಿಯ ಚಲನವಲನಗಳನ್ನು ನೋಡಿ ತಂದೆ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಮೃತ ಬಾಲಕಿಯ ಪುಟ್ಟ ಗುಡಿಸಿಲಿನ ಮನೆ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶದಲ್ಲಿದ್ದು ಕೂಡಲೇ ದಾರಿಹೋಕರು ಇವರ ಕಿರುಚಾಟ ವನ್ನು ನೋಡಿ ಸಮೀಪಕ್ಕೆ ಹೋಗಿ ಸ್ಪಷ್ಟ ಮಾಹಿತಿಯನ್ನು ತಿಳಿದು ನಂಜನಗೂಡು ಪಟ್ಟಣ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ನಂಜನಗೂಡು ಪಟ್ಟಣ ಠಾಣೆ ಪಿಎಸ್‍ಐ ಆನಂದ್ ವೃತ್ತ ನಿರೀಕ್ಷಕ ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿಗಳು ಈಗ ಮೃತ ಪುಟ್ಟ ಬಾಲಕಿಯ ಗುಡಿಸಿಲಿನಲ್ಲಿ ಬಂದು ಪರಿಶೀಲನೆ ಮಾಡುತ್ತಿದ್ದಾರೆ. ಮೃತ ಬಾಲಕಿಯ ತಂದೆ ತಾಯಿಗೆ ಧೈರ್ಯ ಹೇಳಿ ಕಾಮುಕ ಪಿಶಾಚಿಗಳನ್ನು ಬಂಧಿಸಲು ಮತ್ತು ನ್ಯಾಯ ಒದಗಿಸಿಕೊಡಲು ಭರವಸೆ ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರದ ಘಟನೆಯನ್ನು ನೋಡಿ ನಂಜನಗೂಡಿನ ಪೊಲೀಸರು ಕೂಡ ಬೆಚ್ಚಿ ಬಿದ್ದಿದ್ದಾರೆ. ಶೀಘ್ರದಲ್ಲಿಯೇ ಪಾತಕಿಗಳನ್ನು ಬಂಧಿಸುವುದಾಗಿ ಅಭಯ ನೀಡಿದ್ದಾರೆ.

Leave a Comment