ಅಪ್ರಾಪ್ತ ಬಾಲಕಿ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹ

ದಾವಣಗೆರೆ,ಸೆ.11- ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಅಪ್ರಾಪ್ತ ವಯಸ್ಸಿನ ರೂಪಾಳ ಮೇಲೆ ಪೈಚಾಚಿಕ ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.ಈವೇಳೆ ಸಮಾಜದ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ ಮಾತನಾಡಿ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸ್ವಗ್ರಾಮವಾದ ಹೊಸಗೇರಿಯಲ್ಲಿ ಇದ್ದ ರೇವಣ್ಣ ಮಡಿವಾಳರ ತಮ್ಮ ದಿನನಿತ್ಯದ ಜೀವನ ನಿರ್ವಹಣೆಗಾಗಿ ಕುಟುಂಬದ ಸದಸ್ಯರೊಂದಿಗೆ ಬಳ್ಳಾರಿ ಜಿಲ್ಲಾ ಸಂಡೂರು ತಾಲೂಕು, ವಡ್ಡು ಗ್ರಾಮದ ಈಶ್ವರಪ್ಪ ಗುಡಿ ಹತ್ತಿರ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾ, ಜೀವನ ನಿರ್ವಹಣೆಗಾಗಿ ಕಟ್ಟಡಗಳಿಗೆ ಬಣ್ಣ ಬಳೆಯುವ (ಪೇಂಟರ್) ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇವರ ಮಗಳು ಕು.ರೂಪಾ ಸ್ಥಳೀಯ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂತಹ ಕಂದಮ್ಮನ ಕೊಲೆಯಾಗಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ರೂಪಾಳು ಸೆ.8ರಂದು ಸಂಜೆ 7ಕ್ಕೆ ಕಾಣೆಯಾಗಿ ಸೆ.10ರಂದು ಮಂಗಳವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದು. ಬಾಲಕಿಗೆ ಯಾರೋ ದುಷ್ಕರ್ಮಿಗಳು ಚಾಕಲೇಟ್ ಆಸೆ ತೋರಿಸಿ ಮಗುವನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ರಾಜ್ಯದಲ್ಲಿ ಇಂತಹ ದುಷ್ಕೃತ್ಯಗಳು ಪದೇಪದೇ ನಡೆಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಮುಂದೆ ಇಂತಹ ಕೃತ್ಯಗಳು ರಾಜ್ಯಾದ್ಯಂತ ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ದುಷ್ಕರ್ಮಿಯನ್ನು ಪತ್ತೆ ಹಚ್ಚಿ, ಗಲ್ಲು ಶಿಕ್ಷೆಗೆ ಒಳಪಡಿಸುವ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಮೃತ ಬಾಲಕಿಯ ಪೋಷಕರಿಗೆ ಸರ್ಕಾರ ಕೂಡಲೇ 10 ಲಕ್ಷ ರೂ.ಗಳನ್ನು ಪರಿಹಾರ ನೀಡಬೇಕು. ಒಂದು ವೇಳೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದಲ್ಲದೆ, ಕಾಲ್ನಡಿಗೆ ಜಾಥಾ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪ್ರತಿಭಟನಾಕಾರರು ಜಯದೇವವೃತ್ತದಿಂದ ಮೆರವಣಿಗೆ ಮೂಲಕ ಅಶೋಕ ರಸ್ತೆ, ಗಾಂಧಿ ಸರ್ಕಲ್, ಪಿಬಿ ರಸ್ತೆ, ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ,  ಮುಖ್ಯಮಂತ್ರಿಗಳಿಗೆ ಹಾಗೂ ಗೃಹಮಂತ್ರಿಗಳಿಗೆ ಉಪವಿಭಾಗಾಧಿಕಾರಿಯವರ ಮುಖಾಂತರ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ಎಂ.ಎನ್.ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಖಜಾಂಚಿ ಸುರೇಶ್ ಕೋಗುಂಡೆ,  ಸಹ ಕಾರ್ಯದರ್ಶಿ ಆರ್.ಎನ್.ಧನಂಜಯ, ಪಾಲಿಕೆ ಮಾಜಿ ಸದಸ್ಯೆ ಅನ್ನಪೂರ್ಣಮ್ಮ, ಉಪಾಧ್ಯಕ್ಷರಾದ ವಿಜಯ್‍ಕುಮಾರ್, ಪಿ.ಮಂಜುನಾಥ್, ಡೈಮಂಡ್ ಮಂಜುನಾಥ್, ಪತ್ರಕರ್ತ ಎಂ.ವೈ.ಸತೀಶ್, ಅಂಜಿನಪ್ಪ ಪೂಜಾರ್, ಎಂ.ರುದ್ರೇಶ್, ಸಿ.ಗುಡ್ಡಪ್ಪ, ಪರುಶುರಾಮ್, ಬಸವರಾಜಪ್ಪ ಕುಂದವಾಡ, ಬಸವರಾಜಪ್ಪ, ನಾಗಮ್ಮ, ವಿ.ಲಕ್ಷ್ಮಣ್, ಪಿ.ಕೆ.ಲಿಂಗರಾಜ್, ಜಿ.ಆರ್.ನಾಗರಾಜ್, ಹರಿಹರ ಭೀಮಣ್ಣ, ಡಿ.ಷಣ್ಮುಗಂ, ಅಬ್ದುಲ್ ರೆಹಮಾನ್ ಸಾಬ್, ಭಜನಿ ಹನುಮಂತಪ್ಪ, ಮಹಮ್ಮದ್ ರಫೀಕ್, ಶಿವಕುಮಾರ ಡಿ.ಶೆಟ್ಟರ್, ಫಯಾಜ್ ಆಹಮ್ಮದ್ ಚಂದ್ರನಹಳ್ಳಿ, ಆವರಗೆರೆ ಹನುಮಂತಪ್ಪ, ಲಂಕೇಶ್, ಕುಮಾರ, ಮುರುಗೇಶ್, ನಾಗರಾಜ್, ಹೆಚ್.ಕೆ.ಆರ್.ಸುರೇಶ್, ಬಿ.ದುಗ್ಗಪ್ಪ, ಶ್ಯಾಗಲೆ ಲಕ್ಷ್ಮಣ, ಗೋಶಾಲೆ ರಮೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.

Leave a Comment