ಅಪ್ರತಿಮ ನಾಯಕ ವಾಜಪೇಯಿಗೆ ಜಯಕರ್ನಾಟಕ ಶ್ರದ್ಧಾಂಜಲಿ

ತಿಪಟೂರು, ಆ. ೧೯- ಜಯಕರ್ನಾಟಕ ತಾಲ್ಲೂಕು ಘಟಕದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಯಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ಕುಮಾರ್ ಮಾತನಾಡಿ, ದೇಶಕಂಡ ಅಪ್ರತಿಮ ನಾಯಕ, ಭಾರತ ರತ್ನ ವಾಜಪೇಯಿಯವರ ನಿಧನದಿಂದ ದೇಶ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರಲ್ಲಿ ಅಧಿಕಾರದ ಅಹಂ ಇರಲಿಲ್ಲ. ಎಲ್ಲರನ್ನೂ ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದರು. ಸಾಮಾನ್ಯ ವ್ಯಕ್ತಿಗಳೂ ಸಹ ಅವರನ್ನು ಮಾತನಾಡಿಸಬಹುದಾಗಿತ್ತು. ಆದ್ದರಿಂದಲೆ ಅವರನ್ನು ಅಜಾತಶತ್ರು ಎಂದು ಕರೆಯುತ್ತಿದ್ದರು. ಭಾವುಕ ಜೀವಿ, ಕವಿಯಾಗಿದ್ದ ಅವರು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಇಂತಹ ಮಹಾನ್ ನಾಯಕರ ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ಸಮಾಜದ ಅಭಿವೃದ್ಧಿಯ ಜತೆಗೆ ನಮ್ಮ ಜೀವನ ಹಸನಾಗಲಿದೆ ಎಂದರು.

ವಕೀಲ ಬಸಪ್ಪ ಮಾತನಾಡಿ, ಪ್ರಧಾನ ಮಂತ್ರಿ ವಾಜಪೇಯಿಯವರು ಭಾರತದ ಇತಿಹಾಸದಲ್ಲಿಯೆ ಕಂಡರಿಯದ ಪ್ರಭಾವಿ ವ್ಯಕ್ತಿ. ಶಾಂತ ಸ್ವಭಾವ, ಸದ್ಗುಣ ವ್ಯಕ್ತಿತ್ವ ಹೊಂದಿದ್ದ ಅವರು ಉತ್ತಮ ಆಡಳಿತ ನಡೆಸಿ ಇಡೀ ದೇಶವೆ ಮೆಚ್ಚುವಂತ ಆಡಳಿತ ನಡೆಸಿದ್ದರು. ದೇಶದ ಅಭಿವೃದ್ಧಿಗಾಗಿ ನದಿ ಜೋಡಣೆ, ಚತುಷ್ಪಥ ರಸ್ತೆ ಸೇರಿದಂತೆ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಗಣನೀಯ ಸೇವೆ ಸಲ್ಲಿಸಿದ್ದರು ಎಂದರು.

ಸಭೆಯಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ವಿದ್ಯಾರ್ಥಿ ಘಟಕ ಚಂದನ್, ಖಲಂದರ್, ಯುವ ಘಟಕದ ಅಧ್ಯಕ್ಷ ಮೋಹನ್‍ಬಾಬು, ಉಪಾಧ್ಯಕ್ಷ ಅಭಿ, ರಾಕಿ, ಅಲ್ಪಸಂಖ್ಯಾತ ಘಟಕದ ಅನ್ವರ್‍ಪಾಷ, ನಯಾಜ್, ಫೈರೋಜ್, ನಗರ ಘಟಕ ಗುರುದರ್ಶನ್ ಪ್ರಮೋದ್, ಕಾಂತರಾಜು, ಪದಾಧಿಕಾರಿಗಳಾದ ಪರಮೇಶ್ವರನಾಯ್ಕ, ದೇವರಾಜು, ಬಾಬುನಾಯ್ಕ, ಅರುಣ್, ಗುಬ್ಬಿ ಬಸವರಾಜು, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment