ಅಪ್ಪ ಶೈಕ್ಷಣಿಕ ಕ್ರಾಂತಿ : ಖರ್ಗೆ ಶ್ಲಾಘನೆ

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ನ.9-ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಸಹಸ್ರಾರು ಜನ ವೈದ್ಯರು, ಇಂಜಿನಿಯರುಗಳಾಗಲು ಕಾರಣೀಭೂತರಾಗಿರುವ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ ಅವರು ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದರು.

ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ಸುವರ್ಣ ಮಹೋತ್ಸವ ಮತ್ತು ಅಲಮ್ನೈ ಉತ್ಸವವನ್ನು ಉದ್ಘಾಟಿಸಿ  ಮಾತನಾಡುತ್ತಿದ್ದ ಅವರು,” ಶಿಕ್ಷಣ ಬಹಳ ಮುಖ್ಯ, ಸಂವಿಧಾನದ ನಿರ್ದೇಶನಾತ್ಮಕ ತತ್ವಗಳಲ್ಲಿಯೂ ಸಹ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಶಿಕ್ಷಣ ಮೂಲಭೂತ ಹಕ್ಕಾಗಿರುವುದರಿಂದಾಗಿ ಅನೇಕ ಜನ ಬಡುವರು ಶಿಕ್ಷಣ ಪಡೆಯುವಂತಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಶೇ.14 ರಷ್ಟಿದ್ದ ಸಾಕ್ಷರರ ಸಂಖ್ಯೆ ಇಂದು ಶೇ.76 ರಷ್ಟಾಗಿದೆ. ಶಿಕ್ಷಣ ಪಡೆದ ಹಾಗೆ ದೇಶ ಅಭಿವೃದ್ಧಿಯಾಗುತ್ತದೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ಹೈದ್ರಾಬಾದ ಕರ್ನಾಟಕ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರ ಮತ್ತು ಕೊಪ್ಪಳ ಜಿಲ್ಲೆಗಳು ಶಿಕ್ಷಣ ರಂಗದಲ್ಲಿ ಅತ್ಯಂತ ಹಿಂದುಳಿದಿದ್ದು, ರಾಜ್ಯ ಮತ್ತು ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಅಕ್ಷರ ವಂಚಿತರ ಸಂಖ್ಯೆ ಹೆಚ್ಚಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಸಾಕ್ಷರರ ಸಂಖ್ಯೆ ಹೆಚ್ಚಿಸಬೇಕಾಗಿದೆ ಎಂದರು.

ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಶಾಲೆಗಳಲ್ಲಿ ಗಣಿತ, ಇಂಗ್ಲೀಷ್ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಈ ವಿಷಯಗಳಿಗೆ ಹೆಚ್ಚಿನ ಒತ್ತು ನೀಡದೇ ಇರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಈ ವಿಷಯಗಳಲ್ಲಿ ಅನ್ನುತ್ತೀರ್ಣರಾಗುತ್ತಿರುವುದರಿಂದ ಮುಂದೆ ಅವರು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಸಂವಿಧಾನದ 371(ಜೆ) ಕಲಂ ತಿದ್ದುಪಡಿಯಿಂದಾಗಿ ಶಿಕ್ಷಣ, ಅಭಿವೃದ್ಧಿ ಮತ್ತು ನೇಮಕಾತಿಯಲ್ಲಿ ಈ ಭಾಗದವರಿಗೆ ಹೆಚ್ಚಿನ ಆದ್ಯತೆ ದೊರೆತಂತಾಗಿದೆ. ಸಿ ಮತ್ತು ಡಿ ಗ್ರೂಪ್ ಹುದ್ದೆಗಳ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶದ ಹೊರಗಡೆಯೂ ಸಹ ನೇಮಕಾತಿಯಲ್ಲಿ ಶೇ.8ರಷ್ಟು ಮೀಸಲಾತಿ ದೊರೆಯುತ್ತಿದೆ ಎಂದರು.

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆಗಿರುವ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸಪ್ಪ ಅಪ್ಪ ಸಮಾರಂಭದ ಸಾನಿಧ್ಯವಹಿಸಿದ್ದರು. ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜುರಾಯಿ ಸಚಿವ ರಾಜಶೇಖರ ಬಿ.ಪಾಟೀಲ,ರಾಜ್ಯಸಭಾ ಮಾಜಿ  ಬಸವರಾಜ ಪಾಟೀಲ ಸೇಡಂ, ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿಯ ಕುಲಪತಿ ಡಾ.ನಿರಂಜನ್ ನಿಷ್ಠಿ, ಎಸ್.ಬಿ.ಆರ್.ಅಲಮ್ನೈ ಅಸೋಶಿಯೇಷನ್ ಅಧ್ಯಕ್ಷ ಡಾ.ಭರತ ಎಲ್.ಕೋಣಿನ್, ಕಾರ್ಯದರ್ಶಿ ಉದಯಕುಮಾರ ನವಣಿ, ಪೋಷಕ ಸದಸ್ಯ ವಿನಾಯಕ ಎಂ.ಮುಕ್ಕಾ, ಎಸ್.ಬಿ.ಆರ್.ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ಎನ್.ಎಸ್.ದೇವರಕಲ್ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದ ವೇದಿಕೆ ಮೇಲಿದ್ದರು.

ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಸ್ಥೆಯ ಸಿಬ್ಬಂದಿಗಳು, ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave a Comment