ಅಪ್ಪನ ಸುಪುತ್ರನಿಗೆ ಅದ್ಧೂರಿ ಸ್ವಾಗತ

ಕಲಬುರಗಿ,ನ.10-ಪುತ್ರ ಸಂತಾನ ಪಡೆದು ನಗರಕ್ಕೆ ಆಗಮಿಸಿದ ಶರಣಬಸವೇಶ್ವರ ಮಹಾಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ-ದಾಕ್ಷಾಯಿಣಿ ಅಪ್ಪ ದಂಪತಿಗೆ ಗುರುವಾರ ರಾತ್ರಿ ಅದ್ಧೂರಿ ಸ್ವಾಗತ ಕೋರಲಾಯಿತು.
ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ದಾಕ್ಷಾಯಿಣಿ ಅಮ್ಮ ಮತ್ತು ಡಾ.ಶರಣಬಸಪ್ಪ ಅಪ್ಪ ಅವರು ನಗರಕ್ಕೆ ಆಗಮಿಸುತ್ತಿದ್ದಂತೆಯೇ ಭಕ್ತರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶಾಲೆಯ ಮಕ್ಕಳು, ಸಿಬ್ಬಂದಿಗಳು, ಮಹಿಳೆಯರು ಕುಂಭಮೇಳ, ಕಳಶದೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡರು.
ಅಪ್ಪ ದಂಪತಿ ತಮ್ಮ ಸುಪತ್ರನೊಂದಿಗೆ ಹೂವಿನಿಂದ ಅಲಂಕಾರ ಮಾಡಿದ ಕಾರಿನಲ್ಲಿ ನಗರದ ರೈಲು ನಿಲ್ದಾಣದಿಂದ ಶರಣಬಸವೇಶ್ವರ ದೇವಸ್ಥಾನ ಸಂಚರಿಸಿದ ಮಾರ್ಗದುದ್ದಕ್ಕೂ ಅಸಂಖ್ಯೆಯಲ್ಲಿ ಭಕ್ತ ಸಮೂಹ, ಅಭಿಮಾನಿಗಳು, ಬಂಧುಗಳು ಹಾಗೂ ಸಂಸ್ಥಾನದ ಶಾಲಾ-ಕಾಲೇಜು ಸಿಬ್ಬಂದಿಗಳು ವಿದ್ಯಾರ್ಥಿಗಳ ಜನ ಸಾಗರವೇ ಹರಿದುಬಂತು.
ಶರಣಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಜನಸಾಗರವೇ ತುಂಬಿತ್ತು. ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜ್ಯರು ಮಂಗಳಾರತಿ ನೆರವೇರಿಸಿ ಶರಣಬಸವೇಶ್ವರ ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ ಜನಜಾತ್ರೆಯೇ ತುಂಬಿದ್ದರಿಂದ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು.

Leave a Comment