ಅಪಾರ್ಟ್ ಮೆಂಟ್ ಗಳ ನೋಂದಣಿ ಶುಲ್ಕ ಇಳಿಕೆಗೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು. ಮೇ 26 -ಕೋವಿಡ್ 19 ಸಂಕಷ್ಟದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ಸರಿದೂಗಿಸುವ ಹಿನ್ನೆಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡಿರುವ ರಾಜ್ಯ ಸರ್ಕಾರ ಅಪಾರ್ಟ್ ಮೆಂಟ್ ಗಳ ನೋಂದಣಿ ಶುಲ್ಕವನ್ನು ಕಡಿಮೆ ಮಾಡಲು ತೀರ್ಮಾನಿಸಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ 2020-21 ನೇ ಸಾಲಿನಲ್ಲಿ 3524 ಕೋಟಿ ರೂ.ಗಳಷ್ಟು ರಾಜಸ್ವ ಕಡಿಮೆಯಾಗುವ ಆತಂಕದ ಹಿನ್ನೆಲೆಯಲ್ಲಿ 20 ಲಕ್ಷ ರೂ ಮೌಲ್ಯದ ಅಪಾರ್ಟ್ ಮೆಂಟ್ ಗಳ ಮೊದಲ ನೊಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ 5 ರಿಂದ 2 ಕ್ಕೆ ಹಾಗೂ 20 ರಿಂದ 35 ಲಕ್ಷ ರೂ ಮೌಲ್ಯದ ಒಳಗಿನ ನೊಂದಣಿ ಶುಲ್ಕವನ್ನು ಶೇ 5 ರಿಂದ ಶೇ. 3 ಕ್ಕೆ ಇಳಿಸಲು ನಿರ್ಧರಿಸಿದೆ.
ಕಂದಾಯ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಸೂಚನೆ ನೀಡಿದ್ದಾರೆ.
ಇದಲ್ಲದೇ ಅನುಭವ ಮಂಟಪ ಸ್ಥಾಪನೆಗೆ 100 ಕೋಟಿ ರೂ.ಗಳನ್ನು ಒದಗಿಸಲು ಹಾಗೂ ರಾಜ್ಯದ 164 ತಾಲ್ಲೂಕುಗಳಲ್ಲಿ ಭೂ ನ್ಯಾಯ ಮಂಡಳಿ ರಚಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಡ್ರೋನ್ ಆಧಾರಿತ ಸರ್ವೆ ನಡೆಸುವ ಯೋಜನೆಯಡಿ 16000 ಗ್ರಾಮಗಳನ್ನು ಗುರುತಿಸಲಾಗಿದೆ. ಗ್ರಾಮ ನಿವಾಸಿಗಳಿಗೆ ವಾಸಸ್ಥಳದ ಆಸ್ತಿಗಳಿಗೆ ಸಂಬಂಧಿಸಿದಂತೆ ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆ ಇದಾಗಿದೆ. ದೇಶದ 7 ರಾಜ್ಯಗಳ ಪೈಕಿ ಕರ್ನಾಟಕವನ್ನು ಸಹ ಆಯ್ಕೆ ಮಾಡಲಾಗಿದ್ದು, ಈ ಯೋಜನೆಯನ್ನು ತ್ವರಿತವಾಗಿ ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.
ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮೀನುಗಾರಿಕೆ, ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎಸ್.ಆರ್.ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು

Share

Leave a Comment