ಅಪರಿಚಿತ ವ್ಯಕ್ತಿಯ ಕಗ್ಗೊಲೆ

ಮೈಸೂರು:ಫೆ.17- ಉದಯಗಿರಿ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ಅಪರಿಚಿತ ವ್ಯಕ್ತಿಯೋರ್ವರನ್ನು ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.
ಇಂದು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ ಮಂದಿಗೆ ಅಪರಿಚಿತ ಶವ ಗುರುತುಸಿಗದ ರೀತಿಯಲ್ಲಿ ಕಂಡುಬಂದಿದ್ದು, ಮುಖವನ್ನು ಸಂಪೂರ್ಣ ಕಲ್ಲಿನಿಂದ ಜಜ್ಜಲಾಗಿದೆ. ಕೂಡಲೇ ಉದಯಗಿರಿ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಉದಯಗಿರಿ ಠಾಣೆ ಇನ್ಸಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಹಾಗೂ ಶ್ವಾನದಳ ಭೇಟಿ ನೀಡಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿರುವುದು ಯಾರು? ಕೊಲೆಯಾದಾತ ಯಾರು? ಯಾಕಾಗಿ ಕೊಲೆ ಮಾಡಿದರು ಎನ್ನುವುದು ಹೆಚ್ಚಿನ ತನಿಖೆಯಿಂದ ತಿಳಿದುಬರಬೇಕಿದೆ.

Leave a Comment