ಅಪರಿಚಿತರ ಅಟ್ಟಹಾಸ ನಿವಾಸಿಗಳ ಪೀಕಲಾಟ

ಬೆಂಗಳೂರು, ಏ. ೬- ನಗರದ ಪ್ರತಿಷ್ಠಿತ ಬಡಾವಣೆಗಳಾದ ಜಯನಗರ, ಬಸವನಗುಡಿ, ಬನಶಂಕರಿ, ಕೋರಮಂಗಲ, ಬಿಇಎಲ್ ಲೇಔಟ್, ಮಲ್ಲೇಶ್ವರಂ ಮತ್ತಿತರ ಕಡೆ ತಳ್ಳುವ ಗಾಡಿ, ತರಕಾರಿ ಮಾರುವ ನೆಪದಲ್ಲಿ ಕೆಲವು ಅಪರಿಚಿತರು ಬಡಾವಣೆಗಳನ್ನು ಪ್ರವೇಶಿಸಿದ್ದಾರೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇದುವರೆಗೂ ಬಡಾವಣೆಗಳಲ್ಲಿ ಎಂದೂ ಇವರನ್ನು ನೋಡಿಯೂ ಇಲ್ಲ, ಕಂಡೂ ಇಲ್ಲ ಇದೀಗ ತರಕಾರಿ ಮಾರುವ ನೆಪದಲ್ಲಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಬಡಾವಣೆಯ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ ಎಂಬ ಸುದ್ದಿಗಳು ವಾಟ್ಸಾಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕೊರೊನಾ ವೈರಾಣು ಹರಡುತ್ತಿರುವ ಸೂಕ್ಷ್ಮ ಸಮಯದಲ್ಲಿ ತರಕಾರಿಗಳನ್ನು ಆಟೋ, ವ್ಯಾನ್ ಹಾಗೂ ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡಲು ಯಾರೂ ಅನುಮತಿ ನೀಡದಿದ್ದರೂ ಅವರಾಗಿಯೇ ಬಡಾವಣೆಗಳಿಗೆ ಪ್ರವೇಶ ಮಾಡಿರುವುದು ಬಡಾವಣೆಯ ಜನರನ್ನು ಆತಂಕಕ್ಕೆ ಸಿಲುಕಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಮಾರಾಟಗಾರರು ಸುರಕ್ಷತೆ ಮತ್ತು ಶುಚಿತ್ವಕ್ಕೆ ಯಾವುದೇ ಆದ್ಯತೆ ನೀಡಿಲ್ಲ, ಜತೆಗೆ ಅಪರಿಚಿತರಾಗಿರುವ ಹಿನ್ನೆಲೆಯಲ್ಲಿ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಅಪರಿಚಿತ ಈ ರೀತಿಯ ಮಾರಾಟಗಾರರು ನಿಮ್ಮ ಬಡಾವಣೆಗಳಿಗೆ ತರಕಾರಿ ಮಾರುತ್ತಿದ್ದರೆ ಅದನ್ನು ಕೊಂಡುಕೊಳ್ಳಬೇಡಿ ಎಂದು ಜನರಲ್ಲಿ ಮನವಿ ಮಾಡಲಾಗಿದೆ.

ತುಸು ಕಷ್ಟವಾದರೂ ಸರಿ, ಹತ್ತಿರವಿರುವ ಇಲ್ಲವೆ ಗೊತ್ತಿರುವ ಅಂಗಡಿ ಮಳಿಗೆಗಳಿಗೆ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿಗಳು ಸೇರಿದಂತೆ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡಿ ಅಪರಿಚಿತರಿಂದ ಯಾವುದೇ ವಸ್ತುಗಳನ್ನು ಕೊಳ್ಳಬೇಡಿ ಎಂದು ಮನವಿ ಮಾಡಲಾಗಿದೆ.

ತುಸು ದೂರ ಹೋಗುವವರು ಯಾರು ಎಂದು ಅಲಕ್ಷ್ಯ ಅಥವಾ ನಿರ್ಲಕ್ಷ್ಯ ಮಾಡಿ ಮನೆ ಮುಂದೆ ಅಥವಾ ಬೀದಿಗೆ ಬರುವ ಅಪರಿಚಿತ ತರಕಾರಿ ಮಾರಾಟಗಾರರಿಂದ ವಸ್ತುಗಳನ್ನು ಕೊಂಡರೆ ಸಮಸ್ಯೆಯನ್ನು ತಾವಾಗಿಯೇ ಆಹ್ವಾನಿಸಿದಂತಾಗುತ್ತದೆ. ಈ ಕುರಿತು ಎಚ್ಚರಿಕೆಯಿಂದಿರಿ ಜತೆಗೆ ಅಕ್ಕ-ಪಕ್ಕದವರ ಮನೆಯವರನ್ನು ಜಾಗೃತಗೊಳಿಸಿ ಎನ್ನುವ ಮನವಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Leave a Comment