ಅಪರಿಚಿತನ ಗುಂಡಿಗೆ ಆಂಧ್ರದ ವ್ಯಕ್ತಿ ಸೇರಿ ನಾಲ್ವರು ಬಲಿ

ಒಹೈಯೇ (ಅಮೆರಿಕ), ಸೆ. ೭: ಇಲ್ಲಿನ ಡೌನ್‌ಟೌನ್ ಸಿನ್ಸಿನಾಟ್ಟಿ ನಗರದ ಬ್ಯಾಂಕ್‌ನಲ್ಲಿ ದುಷ್ಕರ್ಮಿಯೊಬ್ಬ ಯದ್ವಾತದ್ವಾ ಗುಂಡು ಹಾರಿಸಿ ಮೂವರನ್ನು ಕೊಂದಿದ್ದು, ತಾನೂ ಸಹ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಮೃತರಲ್ಲಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಗೆ ಸೇರಿದ ಪೃಥ್ವಿರಾಜ್ ಕಂಡೆಪಿ ಎಂಬುವರೂ ಸೇರಿದ್ದು, ಹಲವರು ಗಾಯಗೊಂಡಿದ್ದಾರೆ.

ಫೌಂಟೇನ್ ಚೌಕದ ಸಮೀಪ ಫಿಫ್ತ್ ಥರ್ಡ್ ಬ್ಯಾಂಕ್ ಒಳಗಿನ ಲೋಡಿಂಗ್ ಡಾಕ್ ಒಳಗೆ ನುಗ್ಗಿದ್ದ ದುಷ್ಕರ್ಮಿ ಗುಂಡು ಹಾರಿಸುತ್ತಾ ಮುಂಭಾಗದ ಲಾಬಿಗೆ ಬಂದಾಗ ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿ ನಮ್ಮ ಗುಂಡಿಗೆ ಬಲಿಯಾದ ಎಂದು ಸಿನ್ಸಿನಟ್ಟಿ ಪೊಲೀಸ್ ಮುಖ್ಯಸ್ಥ ಎಲಿಯಟ್ ಇಸಾಕ್ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಿನ್ಸಿನಟ್ಟಿ ಮೇಯರ್ ಜಾನ್ ಕ್ರಾನ್ಲೆ ಮಾತನಾಡಿ, ದುಷ್ಕರ್ಮಿಯ ಗುಂಡಿಗೆ ಬಲಿಯಾದವರು ಅಮಾಯಕರಂತೆ ಕಾಣುತ್ತಾರೆ. ಘಟನಾ ಸ್ಥಳಕ್ಕೆ ಪೊಲೀಸರು ಕ್ಷಣಾರ್ಧದಲ್ಲಿ ಬಂದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಗರಪಾಲಿಕೆ ಸದಸ್ಯ ಪಿ.ಜಿ. ಸಿಟ್ಟೆಲ್‌ಫೆಲ್ಡ್ ಮಾತನಾಡಿ, ದುಷ್ಕರ್ಮಿ (ಗನ್ ಮ್ಯಾನ್) ಉದ್ದೇಶ ಏನಿತ್ತೆಂದು ಖಚಿತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ನಾರ್ತ್ ಬೆಂಡ್ ಪಟ್ಟಣದ ೨೯ ವರ್ಷದ ಒಮರ್ ಎರ್ನಿಕ್ ಸಂತ ಪರೇಜ್ ಎಂಬ ಹೆಸರಿನ ಗನ್ ಮ್ಯಾನ್ ಗುಂಡಿಗೆ ಭಾರತೀಯರಾದ ಆಂಧ್ರ ಪ್ರದೇಶ ಗುಂಟೂರಿನ ಪೃಥ್ವಿರಾಜ್ ಬಲಿಯಾಗಿದ್ದಾರೆಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಮಹಾ ರಾಯಭಾರಿ ಸಂದೀಪ್ ಚಕ್ರವರ್ತಿ ತಿಳಿಸಿದ್ದು, ಪೊಲೀಸರು ಹಾಘೂ ಪೃಥ್ವಿರಾಜ್ ಕುಟುಂಬದವರನ್ನು ಸಂಪರ್ಕಿಸಿರುವುದಾಗಿ ಹೇಳಿದರು.
ಮೃತ ಪೃಥ್ವಿರಾಜ್ ಬ್ಯಾಂಕ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಉತ್ತರ ಅಮೇರಿಕದ ತೆಲುಗು ಸಂಘದ (ಟಿಎಎನ್‌ಎ) ಅಧಿಕಾರಿ ತಿಳಿಸಿದ್ದು, ಆವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.

Leave a Comment