ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಕಲ್ ಜಾಗೃತಿ ಜಾಥಾ

ದಾವಣಗೆರೆ,ಡಿ,2; ರಸ್ತೆ ನಿಯಮಗಳನ್ನು ಪಾಲಿಸಿ-ಅಪರಾಧಗಳನ್ನು ತಪ್ಪಿಸಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ… ಸೇರಿದಂತೆ ವಿವಿಧ ಜಾಗೃತಿ ಘೋಷಣಾ ಫಲಕಗಳೊಂದಿಗೆ ನಗರದ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಜಾಗೃತಿ ಜಾಥಾದಲ್ಲಿ ಸಾಗಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿಂದು ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಸೈಕಲ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಪಿ.ಹನುಮಂತರಾಯ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ ಮಾಹೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಅಪರಾಧ ತಡೆ ಕುರಿತು ಹಾಗೂ ರಸ್ತೆ ಸುರಕ್ಷತೆ ಕುರಿತಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಈ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ.
ಡಿಸೆಂಬರ್ ಮಾಹೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳು, ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಅಪರಾಧ ತಡೆ ಕುರಿತಾಗಿ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಇಂದು ಅಪರಾಧ ತಡೆ ಮಾಸಾಚರಣೆ ಆರಂಭದಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅಪರಾಧ ತಡೆ ಕುರಿತಾದ ಜಾಗೃತಿ ಫಲಕಗಳೊಂದಿಗೆ ನಗರದ ಮುಖ್ಯ ಭಾಗಗಳಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಹಾಗೂ ಇಂದು ಸಂಜೆ ಸೈಬರ್ ಅಪರಾಧಗಳ ಕುರಿತು ತಜ್ಞರಿಂದ ಮಾಹಿತಿ ಸಭೆಯನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಈ ಮಾಸಾಚರಣೆಯಿಂದ ಅರಿವು ಪಡೆದುಕೊಂಡು ಅಪರಾಧಗಳು ತಡೆಯುವಲ್ಲಿ ಸಹಕರಿಸಬೇಕೆಂದು ಕರೆ ನೀಡಿದರು. ಹಾಗೂ ಶಾಲಾ ಮಕ್ಕಳೊಂದಿಗೆ ಸೈಕಲ್ ಸವಾರಿ ಮಾಡುವ ಮೂಲಕ ಜಾಥಾದಲ್ಲಿ ಪಾಲ್ಗೊಂಡರು.
ಸೈಕಲ್ ಜಾಥಾ ಹೈಸ್ಕೂಲ್ ಮೈದಾನದಿಂದ ಆರಂಭಿಸಿ, ಓಲ್ಡ್ ಐಬಿ, ಬಿಎಸ್‍ಎನ್‍ಎಲ್ ಆಫೀಸ್, ಎಂ.ಜಿ.ಸರ್ಕಲ್, ಮಂಡಿಪೇಟೆ, ವಸಂತ ರಸ್ತೆ, ಅರಣಾ ಸರ್ಕಲ್, ಎವಿಕೆ ರಸ್ತೆ, ಕೆಇಬಿ ಸರ್ಕಲ್, ಭಗತ್ ಸಿಂಗ್ ನಗರ ಆಟೋ ಸ್ಟ್ಯಾಂಡ್ ಮೂಲಕ ಕೆಟಿಜೆ ನಗರ ಪೊಲೀಸ್ ಠಾಣೆವರೆಗೆ ಸಾಗಿತು.
ಜಾಥಾ ಕಾರ್ಯಕ್ರಮದಲ್ಲಿ ಎಎಸ್‍ಪಿ ರಾಜೀವ್, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್, ಮಹಿಳಾ ಪೊಲೀಸ್ ಇನ್ಸ್‍ಪೆಕ್ಟರ್ ನಾಗಮ್ಮ ಸೇರಿದಂತೆ ಇತರೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment