ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ

ತುಮಕೂರು, ಜ. ೧೨- ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂಬ ಉದ್ದೇಶದಿಂದ ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ಯುವಕರು ಇಲಾಖೆ ಸಹಕಾರದೊಂದಿಗೆ ನಗರದಲ್ಲಿ ಅಪರಾಧ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ದ್ವಿಚಕ್ರ ವಾಹನ ಜಾಥಾ ಹಮ್ಮಿಕೊಂಡಿದೆ. ಸಾರ್ವಜನಿಕರು ಕೈಜೋಡಿಸಿದರೆ ಪೊಲೀಸ್ ಇಲಾಖೆ ಮತ್ತಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯ ಗೋಪಿನಾಥ್ ಹೇಳಿದರು.

ನಗರದಲ್ಲಿ ಜಿಲ್ಲಾ ಪೊಲೀಸರು ಹಾಗೂ ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಸಾರ್ವಜನಿಕರಲ್ಲಿ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚೆಗೆ ನಗರದಲ್ಲಿ ವ್ಯಕ್ತಿಗಳ ಗಮನವನ್ನು ಬೇರೆಡೆಗೆ ಸೆಳೆದು ಹಣ, ಬೆಲೆ ಬಾಳುವ ವಸ್ತುಗಳು, ಮಹಿಳೆಯ ಮೈಮೇಲಿದ್ದ ಸರಗಳನ್ನು ಕಳವು ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಬರುವ ಮಹಿಳೆಯ ಸರಗಳ್ಳತನ ಪ್ರಕರಣಗಳು ಅಲ್ಲಲ್ಲಿ ವರದಿಯಾಗಿವೆ. ಆದ್ದರಿಂದ ಮಹಿಳೆಯರು ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ವಾಯು ವಿಹಾರದ ಸಂದರ್ಭದಲ್ಲಿ ಆದಷ್ಟು ಒಡವೆಗಳನ್ನು ಕಡಿಮೆ ಧರಿಸಬೇಕು. ವಾಹನಗಳು ಕಳುವಾಗದಂತೆ ಅಗತ್ಯ ಮುನ್ನಚ್ಚರಿಕೆ ವಹಿಸಬೇಕು. ಅನಿವಾರ್ಯವಾಗಿ ಹೊರ ಹೋಗುವ ಸಂದರ್ಭದಲ್ಲಿ ಪರಿಚಿತರಿಗೆ ವಿಷಯ ತಿಳಿಸಿ, ಮಲಗುವ ವ್ಯವಸ್ಥೆ ಮಾಡಬೇಕು. ಈ ವೇಳೆ ಬೆಲೆ ಬಾಳುವ ವಸ್ತುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು, ಇಲ್ಲವೇ ಬ್ಯಾಂಕ್ ಲಾಕರ್‍ನಲ್ಲಿ ಇಟ್ಟು ಹೋಗುವಂತೆ  ಸಲಹೆ ನೀಡಿದರು.

ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಅಪರಾಧ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ಒಂದು ಉತ್ತಮ ಕಾರ್ಯ ಹಮ್ಮಿಕೊಂಡಿದೆ. ಸರಗಳ್ಳತನ, ಮನೆ ಕಳುವು, ವಾಹನ ಕಳುವು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಕರಪತ್ರಗಳನ್ನು ವಿತರಿಸುವ ಮೂಲಕ ಪೊಲೀಸರ ಕಾರ್ಯಕ್ಕೆ ಸಹಕಾರ ನೀಡಿರುವುದು ಸಂತೋಷದ ವಿಚಾರ. ಇದು ಪ್ರತಿ ಮನೆಗೂ ತಲುಪುವಂತೆ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ, ಎಪಿಎಂಸಿ ಅಧ್ಯಕ್ಷ ಗಂಗಾಧರಯ್ಯ,ಎಸ್ಎಸ್ಐಟಿ ಪ್ರಾಚಾರ್ಯ ಡಾ.ವೀರಯ್ಯ, ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಶ್ವಾಸ್, ಉಪಾಧ್ಯಕ್ಷ ಉಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಿಂದ ಹೊರಟ ದ್ವಿಚಕ್ರವಾಹನ ಱ್ಯಾಲಿ ಎಸ್ಎಸ್‌ಪುರಂ ಮುಖ್ಯರಸ್ತೆ,  ಭದ್ರಮ್ಮ ಸರ್ಕಲ್, ಎಸ್.ಎಸ್. ಸರ್ಕಲ್, ಕೋತಿತೋಪು, ಕೋಟೆ ಆಂಜನೇಯ ವೃತ್ತ, ಹೊರಪೇಟೆ ವೃತ್ತ, ಕೆ.ಆರ್. ಬಡಾವಣೆ, ಟೌನ್‍ಹಾಲ್, ಕುಣಿಗಲ್ ರಸ್ತೆ ಮೂಲಕ ಎಸ್.ಎಸ್.ಐ.ಟಿ. ಬಳಿ ಮುಕ್ತಾಯಗೊಂಡಿತು.

Leave a Comment