ಅಪಘಾತ: ಓರ್ವ ಸಾವು, 12 ಜನರಿಗೆ ಗಾಯ

ಧಾರವಾಡ, ಜ 14: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಜನರು ಗಾಯಗೊಂಡ ಘಟನೆ ಜಿಲ್ಲೆಯ ಬೆಳಗಾವಿ ರಸ್ತೆಯ ಪೆಪ್ಸಿ ಕಂಪನಿಯ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಟಾಟಾ ಮ್ಯಾಜಿಕ್ ವಾಹನ ಚಾಲಕ ಲಕ್ಷ್ಮಣಗೌಡ ಶಂಕರಗೌಡ ಪಾಟೀಲ್ (35) ಮೃತಪಟ್ಟಿದ್ದಾನೆ. ಮೃತ ಲಕ್ಷ್ಮಣಗೌಡ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ನಿವಾಸಿ.
ಅಪಘಾತದಲ್ಲಿ ಗಾಯಗೊಂಡವರು ಬಸವರಾಜ ಫಕ್ಕೀರಪ್ಪ ಮರೇಕಾರ (50), ರಣಬೀರಸಿಂಗ್ ಗುರುದಾಸ ಸಿಂಗ್ ಸಹರಾನ್ (62) ಬಸೀರ್ ಹುಸೇನ್ ಸಾದಿಕ್ ತಡಕೋಡ (29) ಅಬ್ದುಲ್ ಸಮೀರ, ಅಬ್ದುಲ್ ಗಫಾರ್ ಮನಿಯಾರ (62) ನಿತಿನ್ ರಾಜಶೇಖರ ಕೆಲಗೇರಿ (25) ಸಂತೋಷ ಚನ್ನಬಸಯ್ಯ ಬಡಿಮಠ (19) ಉದಯ ಯಲ್ಲಪ್ಪ ಮುರಗೋಡ (32) ಆಯೇಶಾ ಫೀರೋಜ್ ದೊಡ್ಡಮನಿ (42) ತಿಲಕಕುಮಾರ ವಗ್ಗರ (21), ರಫೀಕ ಮಕಾನದಾರ (19) ಯಮನಪ್ಪ ಕುರಿ (47) ಇನ್ನೋರ್ವ ಗಾಯಗೊಂಡಿದ್ದು, ಹೆಸರು ತಿಳಿದು ಬಂದಿಲ್ಲ.
ಕಾರು ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿತ್ತು. ಇದೇ ಸಂದರ್ಭದಲ್ಲಿ ಕಾರು ಚಾಲಕ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಆಯತಪ್ಪಿದ್ದಾನೆ. ನಂತರ ಕಾರಿನ ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರ ಹಾಗೂ ಟಾಟಾ ಮ್ಯಾಜಿಕ್ ವಾಹನಗಳು ಸಹ ಆಯತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಟಾಟಾ ಮ್ಯಾಜಿಕ್ ವಾಹನದ ಚಾಲಕ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಕೆಲವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಉಳಿದವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.  ಪ್ರಕರಣ ಕುರಿತು ಧಾರವಾಡ ಸಂಚಾರಿ ಪೊಲೀಸ್ ಅಧಿಕಾರಿಗಳು ಹಾಗೂ ಡಿಸಿಪಿ ನ್ಯಾಮಗೌಡ ಹಾಗೂ ಎಸಿಪಿ ಎಸ್.ಎಮ್. ಸಂದಿಗವಾಡ, ಇನ್ಸಪೆಕ್ಟರ್  ಮುರಗೇಶ ಚನ್ನಣ್ಣನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Leave a Comment