ಅಪಘಾತಗಳಿಗೆ ೧೧ ಬಲಿ ಹಾಸನ ಬಳಿ ಕಮರಿಗೆ ಬಿದ್ದ ವೋಲ್ವೋ, ಮುಳಬಾಗಿಲು ಬಳಿ ಮರಕ್ಕೆ ಆಟೋ ಡಿಕ್ಕಿ

ಹಾಸನ/ಕೋಲಾರ, ಜ.೧೩: ಹಾಸನದ ಶಾಂತಿಗ್ರಾಮದ ಬಳಿ ಹಾಗೂ ಕೋಲಾರದ ಮುಳಬಾಗಿಲು ಬಳಿ ನಿನ್ನೆ ಮಧ್ಯರಾತ್ರಿ ಸಂಭವಿಸಿರುವ ಪ್ರತ್ಯೇಕ ಎರಡು ರಸ್ತೆ ಅಪಘಾತಗಳಲ್ಲಿ ದೇವರ ದರ್ಶನಕ್ಕೆ ಹೋಗುತ್ತಿದ್ದ ೮ ಮಂದಿ ಹಾಗೂ ದೇವರ ದರ್ಶನ ಮಾಡಿ ಬರುತ್ತಿದ್ದ ಮೂವರು ಸೇರಿ ೧೧ ಮಂದಿ ಮೃತಪಟ್ಟು ೩೦ ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-೭೫ ರಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿಯ ವೋಲ್ವೋ ಬಸ್ ಮಧ್ಯರಾತ್ರಿ ೧೧.೦೫ ರವೇಳೆ ಹಾಸನದ ಶಾಂತಿಗ್ರಾಮದ ಕೃಷಿ ಕಾಲೇಜು ಬಳಿ ಹೆದ್ದಾರಿ ಪಕ್ಕದ ಕಮರಿಗೆ ಉರುಳಿಬಿದ್ದ ಪರಿಣಾಮ ಬೆಂಗಳೂರು ಕೇಂದ್ರಿಯ ವಿಭಾಗದ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ೮ ಮಂದಿ ಮೃತಪಟ್ಟಿದ್ದಾರೆ.

ಮೃತರನ್ನು ಚಾಲಕ ಲಕ್ಷ್ಮಣ (೪೫), ನಿರ್ವಾಹಕ ಶಿವಪ್ಪ ಚಲವಾದಿ (೪೦), ಮಂಗಳೂರಿನ ಡಯಾನ (೨೨), ಬೆಂಗಳೂರಿನ ಎನ್. ಗಂಗಾಧರ್ (೩೦), ಬೆಳ್ತಂಗಡಿಯ ಬಿಜೊ (೨೬), ಬೆಳ್ತಂಗಡಿಯ ಸೋನಿಯಾ (೨೮), ಧರ್ಮಸ್ಥಳದ ಗಂಗಾಧರ್ (೩೬) ಎಂದು ಗುರುತಿಸಲಾಗಿದೆ ಮತ್ತೊಬ್ಬನ ಹೆಸರು ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ.

ಗಾಯಗೊಂಡಿರುವ ೩೦ ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದ್ದು ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಅವರು ಸ್ಥಳಕ್ಕೆ ಧಾವಿಸಿ ಬಸ್‌ನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹೊರಕ್ಕೆ ತಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

ರಸ್ತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಚಾಲಕ ನಿದ್ರಿಸಿರಬಹುದು ಅಥವಾ ಮದ್ಯ ಸೇವಿಸಿ ಚಾಲನೆ ಮಾಡಿರುವುದರಿಂದ ಅಪಘಾತ ಸಂಭವಿಸಿರಬಹುದು. ಮರಣೋತ್ತರ ಪರೀಕ್ಷೆಯ ನಂತರ ಕಾರಣ ತಿಳಿಯಲಿದೆ ಎಂದು ಎಸ್‌ಪಿ ರಾಹುಲ್ ಕುಮಾರ್ ಶಹಪುರವಾಡ್ ತಿಳಿಸಿದ್ದಾರೆ.

ಮೂವರ ಸಾವು
ಕೋಲಾರದ ಮುಳಬಾಗಿಲುವಿನ ಗಾಜಲಬಾವಿ ಬಳಿ ರಾತ್ರಿ ೧೨ರ ವೇಳೆ ಅಪ್ಪೆ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ
ಬಂಗಾರಪೇಟೆ ತಾಲೂಕಿನ ಸುಣ್ಣಕುಪ್ಪಂ ಗ್ರಾಮದ ಭಾಸ್ಕರ್(೩೫), ಪಾರ್ವತಮ್ಮ (೩೮) ಹಾಗೂ ಗೌರಮ್ಮ ಮೃತಪಟ್ಟವರಾಗಿದ್ದು, ಗಾಯಗೊಂಡವರನ್ನು ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಟುಂಬದ ಸಮೇತರಾಗಿ ಮುಳಬಾಗಿಲು ಸಮೀಪದ ಖಾದ್ರಿಪುರದ ಶನಿಮಹಾತ್ಮ ದೇವಾಲಯಕ್ಕೆ ಹೋಗಿ ಬರುವಾಗ ಈ ಅವಘಡ ಸಂಭವಿಸಿದೆ.ಮುಳಬಾಗಿಲು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮಂದಿನ ಕ್ರಮ ಜರಗಿಸಿದ್ದಾರೆ.
ಗಾಯಗೊಂಡಿದ್ದಾರೆ.

೩ ಲಕ್ಷ ಪರಿಹಾರ
ಹಾಸನದ ಶಾಂತಿಗ್ರಾಮದ ಬಳಿ ಸಾರಿಗೆ ಬಸ್ ಅಪಘಾತಕ್ಕೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಕೂಡಲೇ ತಲಾ ೩ ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಾಳುಗಳ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ನಿಗಮದಿಂದ ಭರಿಸಲಾಗುವುದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ. ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.

Leave a Comment