ಅಪಘಾತಕ್ಕೆ ಛಾಯಾಗ್ರಾಹಕ ಬಲಿ

ಮಂಗಳೂರು, ಜ.೧೦- ನಗರದ ಹೊರವಲಯದ ಪಡೀಲ್ ಬಳಿ ನಿನ್ನೆ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವ ಛಾಯಾಗ್ರಾಹಕ ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಮಗಳೂರು ನಿವಾಸಿಯಾಗಿದ್ದು, ಪ್ರಸ್ತುತ ಯೆಯ್ಯಡಿ ನಿವಾಸಿ ಗಣೇಶ್(೨೮) ಮೃತ ಛಾಯಾಗ್ರಾಹಕ. ಗಣೇಶ್ ಯೆಯ್ಯಡಿಯ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ನಗರದಲ್ಲಿ ಸ್ಟುಡಿಯೊಂದರ ಪಾಲುದಾರರಾಗಿದ್ದರು. ನಿನ್ನೆ ಸಜಿಪ ನಾರಾಯಣಗುರು ಮಂದಿರದಲ್ಲಿ ನಡೆದ ವಿವಾಹ ಸಮಾರಂಭದ ಚಿತ್ರೀಕರಣ ಮುಗಿಸಿ ನಗರಕ್ಕೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಸ್ನೇಹಿತ ವೀಡಿಯೊಗ್ರಾಫರ್ ಸಂದೇಶ್ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಗಣೇಶ್ ಹಿಂಬದಿ ಸವಾರರಾಗಿದ್ದರು. ಪಡೀಲ್ ಬಳಿ ಹಿಂಬದಿಯಿಂದ ಕಂಟೈನರ್ ಲಾರಿ ಓವರ್‌ಟೇಕ್ ಮಾಡಿಕೊಂಡು ಬಂದಿದೆ. ಕಂಟೈನರ್ ಹಿಂಭಾಗ ಸ್ಕೂಟರ್‌ಗೆ ತಾಗಿ ನಿಯಂತ್ರಣ ಕಳೆದುಕೊಂಡು ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಸಂದೇಶ್ ಎದ್ದು ನೋಡಿದಾಗ ಗಣೇಶ್ ತಲೆಗೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸಲು ಸುಮಾರು ೧೦ ನಿಮಿಷಗಳ ಕಾಲ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾರು ಕೂಡ ವಾಹನ ನಿಲ್ಲಿಸಲು ಮುಂದಾಗಿಲ್ಲ. ಅಷ್ಟರಲ್ಲಿ ಹಿರಿಯ ಮಹಿಳೆಯೊಬ್ಬರನ್ನು ಕುಳ್ಳಿರಿಸಿಕೊಂಡು ಬಂದ ಆಟೋ ರಿಕ್ಷಾ ಚಾಲಕ ನಿಲ್ಲಿಸಿದ್ದಾರೆ. ಆ ಮಹಿಳೆಯನ್ನು ಇಳಿಸಿ ಗಾಯಾಳು ಗಣೇಶ್‌ರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Leave a Comment