ಅನ್ಯಗ್ರಹ ಜೀವಿಗಳ ಪತ್ತೆ ದೂರದ ಕನಸಲ್ಲ

ಬ್ರಹ್ಮಾಂಡದಲ್ಲಿ ನಾವು ಏಕಾಂಗಿಗಳಲ್ಲ. ಇರುವ ಶತಕೋಟಿಗಟ್ಟಲೆಯ ನಕ್ಷತ್ರ ಮಂಡಲಗಳಲ್ಲಿಯ ಒಂದಲ್ಲಾ ಒಂದು ಗ್ರಹದಲ್ಲಿ ಭೂಮಿಯಲ್ಲಿರುವಂತೆ ಜನ ವಾಸವಿದ್ದು, ಇವರ ಪತ್ತೆ ಇಂದಲ್ಲಾ ನಾಳೆ ಸಾಧ್ಯ ಎಂಬುವುದು ಖಗೋಳ ವಿಜ್ಞಾನಿಗಳ ವಾದ.

ನಾಸಾ ಸೇರಿದಂತೆ ಜಗತ್ತಿನ ಎಲ್ಲಾ ಖಗೋಳ ಸಂಶೋಧನಾ ಸಂಸ್ಥೆಗಳಲ್ಲಿಯ ವಿಜ್ಞಾನಿಗಳು ಈ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಕುರಿತಂತೆ ನಾಸಾದ ಮುಖ್ಯ ಕಚೇರಿಯಲ್ಲಿ ಇದೇ ವರ್ಷ ಜುಲೈ 14 ರಂದು ಸಾರ್ವಜನಿಕವಾಗಿ ಚರ್ಚೆ ನಡೆದಿದೆ. ಅದರಲ್ಲಿ ಅನ್ಯಗ್ರಹ ಜೀವಿಗಳ ಶೋಧನೆಯ ಕುರಿತಂತೆ ನೀಲನಕ್ಷೆಯನ್ನು ತಯಾರಿಸಲಾಗಿದೆ.

`ಮುಂದೆ ಯಾವುದೋ ಒಂದು ದಿನ ನಕ್ಷತ್ರಗಳನ್ನು ನೋಡುತ್ತ, ಆ ನಕ್ಷತ್ರದಲ್ಲಿ ನಮ್ಮ ಭೂಮಿಯಂತಹ ಗ್ರಹವಿದೆ’ ಎಂದು ಜನ ಹೇಳುವ ಸಾಧ್ಯತೆ ಇದೆ ಎಂದು ಕೇಂಬ್ರಿಡ್ಜ್‌ನಲ್ಲಿರುವ ಮೆಸ್ಸಾಚುಟ್ಟೆ ತಂತ್ರಜ್ಞಾನ ಸಂಸ್ಥೆಯ ಖಗೋಳ ವಿಜ್ಞಾನ ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕ ಸಾರಾ ಸೆಗೆರ್ ಹೇಳಿದ್ದಾರೆ.

ಅನ್ಯಗ್ರಹ ಜೀವಿಗಳು ಇರಬಹುದಾದ ಸಾಧ್ಯತೆ ಇರುವ ಗ್ರಹ, ತಾರಾಮಂಡಲಗಳತ್ತ ಬಾಹ್ಯಾಕಾಶ ಸಂಸ್ಥೆಗಳು ಪ್ರಬಲ ವಕ್ಷಣಾ ಸಾಮರ್ಥ್ಯದ ಟೆಲಿಸ್ಕೋಪ್‌ಗಳನ್ನು ನಿಯೋಜಿಸಿವೆ. ಅವುಗಳಲ್ಲಿ ಹಬಲ್ ಸ್ಪೇಸ್ ಟೆಲಿಸ್ಕೋಪ್, ಸ್ಪಿಟ್ಜರ್ ಸ್ಪೇಸ್ ಟೆಲಿಸ್ಕೋಪ್ ಮತ್ತು ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಪ್ರಮುಖವಾದವು. ಮುಂದೆ ಈ ಕಾರ್ಯವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ನಿರ್ವಹಿಸಲಿದೆ.

ಕುತೂಹಲ

ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತಂತೆ, ಹೆಚ್ಚು ಕುತೂಹಲವನ್ನು ಕೆರಳಿಸಿದ್ದು, ವಿಶ್ವದ ಖ್ಯಾತ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ `ಬ್ರೇಕ್ ಥ್ರೂ ಲಿಸನ್ ಪ್ರಾಜೆಕ್ಟ್’ ಅನ್ಯಗ್ರಹ ಜೀವಿಗಳಿಂದ ಬಂದದ್ದು ಎನ್ನಲಾದ 15 ನಿಗೂಢ ರೇಡಿಯೊ ಸಿಗ್ನಲ್‌ಗಳನ್ನು ದಾಖಲಿಸಿರುವುದು. ಈ ಸಿಗ್ನಲ್‌ಗಳು ಶತಕೋಟಿ ಜ್ಯೋತಿರ್ವಷಗಳಷ್ಟು ದೂರದಲ್ಲಿರುವ ಯಾವುದೋ ಅನ್ಯಗ್ರಹದಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ.

ಇದರಿಂದಾಗಿ ಯಾವುದೋ ಅನ್ಯಗ್ರಹದ ಜೀವಿಗಳು ನಮ್ಮ ಹಾಗೆ ಉಳಿದ ಗ್ರಹಗಳ ಶೋಧನೆಯಲ್ಲಿ ತೊಡಗಿರಬೇಕು ಎಂಬುದಕ್ಕೆ ಇದು ಸಾಕ್ಷಿಯಾಗಿದ್ದು, ಅಂತಹ ಗ್ರಹಜೀವಿಗಳೊಂದಿಗೆ ಸಂಪರ್ಕ ಸಾಧಿಸುವುದು ಹೇಗೆ? ಎಂಬ ಜಿಜ್ಞಾಸೆ ಈಗ ವಿಜ್ಞಾನಿಗಳಲ್ಲಿ ಪ್ರಾರಂಭವಾಗಿದೆ.

ಅನ್ಯಗ್ರಹ ಜೀವಿಗಳಿಗೆ ಭೂಮಿಯಿಂದ ಸಿಗ್ನಲ್ ರವಾನಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ಕಾರ್ಮೆಲ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿಗಳು ಮತ್ತು ಜಗತ್ತಿನ ನಾನಾ ಭಾಗಗಳ ವಿಜ್ಞಾನಿಗಳ ಸಹಯೋಗದಲ್ಲಿ ಇಂತಹ ಸಿಗ್ನಲ್ ರವಾನೆ ಕುರಿತಂತೆ ಚರ್ಚೆಗಳು ನಡೆಯುತ್ತಿವೆ.

ಸಿಗ್ನಲ್ ರವಾನಿಸುವುದೇನೋ ಸರಿ, ಆದರೆ ಅನ್ಯಗ್ರಹ ಜೀವಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಸಿಗ್ನಲ್‌ಗಳಿಗೆ ರವಾನಿಸಬೇಕು. ಆ ಭಾಷೆ ಯಾವುದು ಎಂಬುವುದೇ ವಿಜ್ಞಾನಿಗಳಿಗೆ ಈಗ ಎದುರಾಗಿರುವ ದೊಡ್ಡಪ್ರಶ್ನೆ.

ಬಾಕ್ಸ್

ವಿಶ್ವದ ಖ್ಯಾತ ಖಭೌತ ವಿಜ್ಞಾನಿ ಸ್ಟೀಫನ್ಸ್ ಹಾಕಿನ್ಸ್ ಅವರ ಬ್ರೇಕ್ ಥ್ರೂ ಲಿಸನ್ ಪ್ರಾಜೆಕ್ಟ್ ಅನ್ಯಗ್ರಹ ಜೀವಿಗಳಿಂದ ಬಂದದ್ದು ಎನ್ನಲಾದ 15 ನಿಗೂಢ ರೇಡಿಯೊ ಸಿಗ್ನಲ್‌ಗಳನ್ನು ದಾಖಲಿಸಿದೆ. ಇದು ಅನ್ಯಗ್ರಹಜೀವಿಗಳ ಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ.

ಜೀವರಾಶಿಗಳಿಗೆ ಪೂರಕ ವಾತಾವರಣವಿರುವ ಅನ್ಯಗ್ರಹಗಳತ್ತ ಭೂಮಿಯಿಂದ ಸಿಗ್ನಲ್‌ಗಳನ್ನು ಕಳುಹಿಸಬೇಕು ಎಂದು ತುದಿಗಾಲಿನಲ್ಲಿ ನಿಂತಿರುವ ವಿಜ್ಞಾನಿಗಳಿಗೆ, ಅನ್ಯಗ್ರಹ ಜೀವಿಗಳು ಅರ್ಥಮಾಡಿಕೊಳ್ಳಲು ಆ ಸಿಗ್ನಲ್‌ಗಳನ್ನು ಯಾವ ಭಾಷೆಯಲ್ಲಿ ಕಳುಹಿಸಿಬೇಕು ಎಂಬ ದೊಡ್ಡಪ್ರಶ್ನೆ ಎದುರಾಗಿದೆ.

– ಉತ್ತನೂರು ವೆಂಕಟೇಶ್

Leave a Comment