ಅನ್ನ ಆಸರೆಗೆ ಸಂತ್ರಸ್ಥರ ಕಣ್ಣೀರು: 4 ಶವಗಳು ಪತ್ತೆ, ಶಾಲೆಗಳಲ್ಲಿ ಆಶ್ರಯ, ಪರಿಹಾರ ಕಾರ್ಯ ಚುರುಕು

ಬೆಂಗಳೂರು/ಹುಬ್ಬಳ್ಳಿ, ಆ. ೧೪- ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ-ಪ್ರವಾಹ ಸೃಷ್ಟಿಸಿದ ಅವಾಂತರದಿಂದ ಜನ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ಸಂತ್ರಸ್ಥರಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿದೆ.

ಉತ್ತರ ಕರ್ನಾಟಕದ ಹಲವು ಭಾಗ ಹಾಗೂ ಮಲೆನಾಡು-ಕರಾವಳಿಯಲ್ಲಿ ಪರಿಹಾರ ಕಾರ್ಯ ಚುರುಕುಗೊಂಡಿದ್ದು, ಸಂತ್ರಸ್ಥರು ಸರ್ಕಾರಿ ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಕೆಲ ಪ್ರದೇಶಗಳ ಸಂತ್ರಸ್ಥರಿಗೆ ನೆರವು ಕಲ್ಪಿಸುವುದು ಇನ್ನೂ ತೊಂದರೆಯಾಗಿದ್ದು, ಅಂತಹ ಕಡೆ ಸಂತ್ರಸ್ಥ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಡಿಶಾಪ ಹಾಕುವಂತಾಗಿದೆ.
ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಸತ್ತವರ ಸಂಖ್ಯೆ 58ಕ್ಕೇರಿದ್ದು, ಇಂದು ಮಳೆ ಹಾಗೂ ಪ್ರವಾಹದಿಂದ ನಾಪತ್ತೆಯಾಗಿದ್ದ 4 ಮೃತದೇಹಗಳು ಹಾಸನ ಜಿಲ್ಲೆಯಲ್ಲಿ ಪತ್ತೆಯಾಗಿವೆ.

ಮಲೆನಾಡು, ಕರಾವಳಿ ಭಾಗದಲ್ಲಿ ಪರಿಹಾರ ಕಾರ್ಯ ಇನ್ನೂ ಮುಂದುವರೆದಿದ್ದು, ಈ ನಡುವೆಯೇ ಇದೇ 19ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದು ಈ ಭಾಗದ ಜನರನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದ್ದು, ಇದು ದಕ್ಷಿಣ ಒಳನಾಡಿನಲ್ಲಿ ಆ. 16 ರಿಂದ 18ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ, ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಮತ್ತಿತರ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ತುತ್ತು ಅನ್ನಕ್ಕೂ ಪರದಾಟ
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡಿರುವ ಸಂತ್ರಸ್ಥರು ತುತ್ತು ಅನ್ನ, ಕುಡಿಯುವ ನೀರಿಗೂ ಪರದಾಡುವ ಸ್ಥತಿ ನಿರ್ಮಾಣವಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಮನೆಗಳು ನೆಲಸಮಗೊಂಡಿದ್ದು, ಅವುಗಳ ತೆರವುಕಾರ್ಯಾಚರಣೆ ನಡೆದಿದೆ. ಮನೆ ಕುಸಿದ ಪಕ್ಕದಲ್ಲಿ ಮಹಿಳೆಯರು-ಮಕ್ಕಳು ಗಂಜಿಕೇಂದ್ರಗಳಲ್ಲಿ ನೀಡಿದ ಉಪಾಹಾರ ಸೇವಿಸಿ ಬದುಕು ಸಾಗಿಸುವಂತಾಗಿದೆ.

ಬಾದಾಮಿ ತಾಲ್ಲೂಕಿನ ಕರ್ಲಕೊಪ್ಪ ಗ್ರಾಮದ ಗಂಜಿಕೇಂದ್ರದಲ್ಲಿ ತುತ್ತು ಅನ್ನಕ್ಕಾಗಿ ತಟ್ಟೆ ಹಿಡಿದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದ್ದು, ಎಂತವರನ್ನೂ ಕರುಳು ಹಿಂಡುವಂತೆ ಮಾಡಿದೆ. ಈ ಗ್ರಾಮದಲ್ಲೇ ಪ್ರವಾಹದಿಂದಾಗಿ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ನಿರಾಶ್ರಿತರು ಸೂರಿಗಾಗಿ ಅಲೆದಾಡುವಂತಾಗಿದೆ.
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಲಕಮಾಪುರ ಗ್ರಾಮದಲ್ಲಿ ಪ್ರವಾಹ ಕಡಿಮೆಯಾಗಿದ್ದರೂ ಜನರಲ್ಲಿ ಭಯದ ವಾತಾವರಣ ಇನ್ನೂ ದೂರವಾಗಿಲ್ಲ. ಹಾವುಗಳ ಕಾಟ ಹೆಚ್ಚಾಗಿದ್ದು, ಜನರು ಹಿಡಿಜೀವ ಹಿಡಿದು ತಾತ್ಕಾಲಿಕ ಶೆಡ್‌ನಲ್ಲಿ ಬದುಕುವಂತಾಗಿದೆ.

ಅಧಿಕಾರಿಗಳ ಧಮ್ಕಿ
ನೆರೆ ಸಂತ್ರಸ್ಥರನ್ನು ಸರ್ಕಾರಿ ಶಾಲೆಗಳಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಖಾನಾಪುರ ತಾಲ್ಲೂಕಿನ ಹಿರೆಹಟ್ಟಿ ಹೊಳಿ ಗ್ರಾಮದ ಶಾಲೆಯೊಂದರಲ್ಲಿ ಇರುವ ಸಂತ್ರಸ್ಥರನ್ನು ನಾಳೆ ಸ್ವಾತಂತ್ರ್ಯ ದಿನಾಚರಣೆ ಇದೆ ಖಾಲಿ ಮಾಡಿ, ಇಲ್ಲವೆ ಲಾಠಿರುಚಿ ತೋರಿಸಬೇಕಾಗುತ್ತದೆ ಎಂದು ಧಮ್ಕಿ ಹಾಕುತ್ತಿರುವುದು ಸಂತ್ರಸ್ಥರನ್ನು ಕಣ್ಣು – ಬಾಯಿ ಬಿಡುವಂತಾಗಿದೆ.

ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದ್ದರೂ ಪ್ರವಾಹದ ಪರಿಣಾಮ ಇನ್ನೂ ನಿಂತಿಲ್ಲ. ತುಂಗಭದ್ರಾ ನದಿ ಹರಿಯುತ್ತಿದ್ದು, ರಾಯಚೂರು ಭಾಗದ ಜನರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ, ಅಥಣಿ ಸೇರಿದಂತೆ ವಿವಿಧ ಭಾಗಗಳ ಜನರು ತೊಂದರೆ ಅನುಭವಿಸುವಂತಾಗಿದೆ.

ಸಾಂಕ್ರಾಮಿಕ ರೋಗದ ಭೀತಿ
ಮಳೆ-ಪ್ರವಾಹ ನಿಂತರೂ ನೀರು ನಿಂತಲ್ಲೆ ನಿಂತಿರುವುದರಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುವ ಭೀತಿಯಲ್ಲಿ ಬಾಗಲಕೋಟೆ ಜಿಲ್ಲೆಯ ಜನರಲ್ಲಿ ಆತಂಕಮನೆ ಮಾಡಿದೆ. ಜಿಲ್ಲಾಡಳಿತ ಸಂತ್ರಸ್ಥರನ್ನು ಸಂತೈಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಹುಬ್ಬಳ್ಳಿ-ನರಗುಂದ, ವಿಜಯಪುರ ಮೂಲಕ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ ಕೆಣ್ಣೂರು ಗ್ರಾಮದಲ್ಲಿ ಸರಿಸುಮಾರು 2 ಕಿಮೀ ರಸ್ತೆ ಹಾಳಾಗಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡುತ್ತಿರುವುದು ಜನರ ಕೋಪಕ್ಕೆ ಕಾರಣವಾಗಿದೆ.

ಇನ್ನೂ 2 ದಿನ ಮಳೆ
ಮಹಾರಾಷ್ಟ್ರ, ಕೇರಳ, ಒಡಿಶಾ ರಾಜ್ಯಗಳಲ್ಲಿ ಇನ್ನೂ 2 ದಿನ ಮಳೆಯಾಗಲಿದ್ದು, ಅದರ ಪರಿಣಾಮ ರಾಜ್ಯದ ಮೇಲೂ ಬೀರಲಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಗುಡ್ಡ ಕುಸಿತ ಪರದಾಟ
ಚಿಕ್ಕಮಗಳೂರಿನ ಚಾರ್ಮುಡಿಘಾಟ್‌ನಲ್ಲಿ ಮಳೆಯಿಂದಾಗಿರುವ ಅನಾಹುತವನ್ನು ಸರಿಮಾಡುವುದು ಜಿಲ್ಲಾ‌ಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. 20 ಕಿ.ಮೀ ವ್ಯಾಪ್ತಿಯ ಮಾರ್ಗದಲ್ಲಿ 20ಕ್ಕೂ ಹೆಚ್ಚು ಕಡೆ ಭೂಕುಸಿತ ಉಂಟಾಗಿದೆ.
ಬಲಭಾಗಕ್ಕೆ ಬೆಟ್ಟ-ಗುಡ್ಡ, ಎಡಗಡೆ ಪ್ರಪಾತವಿದ್ದು, ವಾಹನ ಸಂಚಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Leave a Comment