ಅನ್ನೋನ್ಯ ಸಂಬಂಧ ರೇವಣ್ಣ ವಾಗ್ದಾನ

ಹಾಸನ, ಡಿ. ೬- ನಾನು ಬದುಕಿರುವವರೆಗೂ ನನ್ನ ತಮ್ಮ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜತೆ ಹೊಡೆದಾಡಲ್ಲ. ಅಣ್ಣ-ತಮ್ಮ ಕಚ್ಛಾಡುತ್ತಾರೆ ಎಂದು ಯಾರಾದರು ಅಂದುಕೊಂಡರೆ ಭ್ರಮೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.
ಸಮ್ಮಿಶ್ರ ಸರ್ಕಾರದ ಆಶಯಕ್ಕೆ ನನ್ನಿಂದ ಯಾವುದೇ ಧಕ್ಕೆಯಾಗಿಲ್ಲ. ವರ್ಗಾವಣೆ ಸೇರಿದಂತೆ ಯಾವುದೇ ಇಲಾಖೆಯಲ್ಲೂ ನಾನು ಹಸ್ತಕ್ಷೇಪ ಮಾಡಿಲ್ಲ. ಬೇಕಾದರೆ ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲೇ ವಿವರಿಸಲು ಸಿದ್ಧ ಎಂದು ಅವರು ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಸಚಿವ ರೇವಣ್ಣನವರಿಂದ ತೊಂದರೆಯಾಗುತ್ತಿದೆ ಎಂಬ ಆರೋಪ ಕಾಂಗ್ರೆಸ್‌ನವರಿಂದ ಕೇಳಿ ಬಂದಿದೆ. ಈ ಬಗ್ಗೆ ಸಿದ್ದರಾಮಯ್ಯ ಸೇರಿ ಯಾವುದೇ ನಾಯಕರು ಕೇಳಿದರು ಉತ್ತರ ಕೊಡಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.
ಬದುಕಿರುವವರೆಗೂ ನಾನು, ಕುಮಾರಸ್ವಾಮಿ ಹೊಡೆದಾಡಲ್ಲ. ಸೋದರರು ಕಚ್ಛಾಡುತ್ತಾರೆ ಎಂಬುದು ಕೆಲವರ ಭ್ರಮೆ ಎಂದು ಕಿಡಿಕಾರಿದ ಅವರು, ಸಿದ್ದರಾಮಯ್ಯ ಮತ್ತು ನನ್ನ ನಡುವೆ ರಾಜಕೀಯ ಮೀರಿದ ಉತ್ತಮ ಸಂಬಂಧವಿದೆ. ನಾನು ಎಂದೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸಚಿವ ಹೆಚ್.ಡಿ ರೇವಣ್ಣ ಸ್ಪಷ್ಟಪಡಿಸಿದರು.
ಈ ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ. ಕುಲದೇವರು ಈಶ್ವರ, ಶೃಂಗೇರಿ ಶಾರದಾಂಬ ಆಶೀರ್ವಾದವಿರುವವರೆಗೂ ಸರ್ಕಾರಕ್ಕೆ ಏನೂ ಆಗಲ್ಲ. ಮಾಟ-ಮಂತ್ರ ಪ್ರಯತ್ನ ಮಾಡಿದರೂ ನಮಗ್ಯಾರಿಗೂ ತಟ್ಟುವುದಿಲ್ಲ. ವಾಮಚಾರ ಮಾಡಿಸಿದವರಿಗೆ ರಿವರ್ಸ್ ಆಗಲಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಮಾಜಿ ಸಚಿವ ಬಿ. ಶಿವರಾಂ ಅವರು ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಹಾಸನಕ್ಕೆ ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳ ಆದೇಶ ಪ್ರತಿತೋರಲಿ.ನಾನು ಕೇಂದ್ರದ ಜತೆ ನಾಲ್ಕು ವರ್ಷಗಳಿಂದ ಪ್ರಯತ್ನ ಮಾಡಿ ತಂದಿರುವ ಹೆದ್ದಾರಿ ಯೋಜನೆಗಳನ್ನು ಮುಂದೆ ಇಡುತ್ತೇನೆ. ಈ ಯೋಜನೆಗಳಿಗೆ ರಾಜ್ಯಸರ್ಕಾರ 10 ರೂ. ಕೊಡಲ್ಲ. ವಿಷಯ ಗೊತ್ತಿದ್ದರೆ ಮಾತನಾಡಲಿ ಎಂದು ಶಿವರಾಂಗೆ ಟಾಂಗ್ ನೀಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಸನ ಜಿಲ್ಲೆಗೆ ಏನು ಕಡಿದು ಕಟ್ಟೆಯಾಕಿದ್ದಾರೆ ಗೊತ್ತಿದೆ. ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು ಜಿಲ್ಲೆಗೆ ಯಾವ ಕೊಡುಗೆ ನೀಡಿದೆ ಎಂಬುದನ್ನು ಬಹಿರಂಗಪಡಿಸುವಂತೆ ಅವರು ಸವಾಲು ಹಾಕಿದರು.
ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡಾನೆ ಸಮಸ್ಯೆಗೆ ಪರಿಹಾರವಾಗಿ ಆನೆ ಕಾರಿಡಾರ್ ನಿರ್ಮಿಸುವ ಸಂಬಂಧ ಕೇಂದ್ರಕ್ಕೆ ಮನವಿ ಮಾಡಲು ವಿಧಾನಮಂಡಲ ಅಧಿವೇಶನ ನಂತರ ದೆಹಲಿಗೆ ನಿಯೋಗ ಕೊಂಡೊಯ್ಯಲಾಗುತ್ತದೆ ಎಂದು ಅವರು ಹೇಳಿದರು.

Leave a Comment