ಅನ್ನಭಾಗ್ಯಕ್ಕೆ ಕನ್ನ : ಪ್ರತಿ ಬಡಾವಣೆಯಲ್ಲಿಯೂ ಅಕ್ಕಿ ಅಕ್ರಮ ಖರೀದಿ – ದಾಸ್ತಾನು

* ಆಹಾರ – ಕೆಲ ಪೊಲೀಸರು ಶಾಮೀಲು : ತಿಂಗಳು ಮಾಮೂಲು
ರಾಯಚೂರು.ಜ.21- ಅನ್ನಭಾಗ್ಯಕ್ಕೆ ಕನ್ನ ಹಾಕುವ ಬಗೆ ಬಗೆಯ ತಂತ್ರಗಳಲ್ಲಿ ಈಗ ಮತ್ತೊಂದು ಕುತಂತ್ರ ಬಹಿರಂಗವಾಗಿದೆ. ನಗರದ ಜಲಾಲ್ ನಗರ ಬಡಾವಣೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಮೇಲೆ ದಾಳಿ ಮಾ‌ಡಿದ ಸ್ಥಳೀಯರು ಆಂಧ್ರದ ಕೊಸಗಿ ಗ್ರಾಮಕ್ಕೆ ಸೇರಿದ ಮೂವರನ್ನು ಬಂಧಿಸಿ, 11 ಮೂಟೆ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುವ ಕರ್ಮಕಾಂಡವನ್ನೇ ಹೊರಗಿಟ್ಟಿದೆ.
ಬಡವರ ಅಸು ನೀಗಿಸುವ ಉದ್ದೇಶದಿಂದ ಜಾರಿಗೆ ತರಲಾದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪಡೆಯುವ ಬಹುತೇಕ ಗ್ರಾಹಕರು ಈ ಅಕ್ಕಿಯನ್ನು ಬ‌ಡಾವಣೆಯಲ್ಲಿ ಮಾರಾಟ ಮಾಡುವುದು ಮತ್ತು ಒಂದು ಮನೆಯಲ್ಲಿ ಇವುಗಳನ್ನು ಸಂಗ್ರಹಿಸಿ, ರೈಸ್ ಮಿಲ್‌ಗಳಿಗೆ ನೀಡುವುದು ಬಯಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಕುಟುಂಬಕ್ಕೆ ನಿರ್ದಿಷ್ಟ ಅಕ್ಕಿಯನ್ನು ವಿತರಿಸಲಾಗುತ್ತದೆ.
ಇದನ್ನು ಪಡೆದ ಗ್ರಾಹಕರು ತಮ್ಮದೇ ಬಡಾವಣೆಯಲ್ಲಿ ಏಜೆನ್ಸಿದಾರರೊಬ್ಬರಿಗೆ ಅಕ್ಕಿ ಮಾರಾಟ ಮಾಡಲಾಗುತ್ತದೆ. 12 ರೂ. ಕೆಜಿಯಂತೆ ಅಕ್ಕಿ ಖರೀದಿಸಲಾಗುತ್ತದೆ. ನಂತರ ಈ ಅಕ್ಕಿಯನ್ನು ಅಕ್ರಮವಾಗಿ 18 ರೂ.ಕೆಜಿಯಂತೆ ಮಾರಾಟ ಮಾಡಲಾಗುತ್ತಿದೆ. ರೈಸ್ ಮಿಲ್‌ಗಳಿಗೆ ಸುಮಾರು 22 ರೂ.ಗಳಂತೆ ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಈ ಒಂದು ಅಕ್ರಮ ನಗರದ ಎಲ್ಲಾ ಬಡಾವಣೆಗಳಲ್ಲೂ ಪ್ರತಿನಿತ್ಯ ನಡೆಯುವ ಕಾಯಕದಂತಾಗಿದೆ.
ಈ ಅಕ್ರಮದ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಸಂಪೂರ್ಣ ಮಾಹಿತಿಯಿದ್ದರೂ, ಯಾರು ಸಹ ತುಟಿ ಪಿಟಕ್ ಎನ್ನದಿರುವುದಕ್ಕೆ ಪ್ರತಿ ತಿಂಗಳು ಮಾಮೂಲು ಸಂದಾಯವಾಗುತ್ತಿದೆ ಎನ್ನುವ ಮಹತ್ವದ ಸಂಗತಿಯೂ ಬಯಲಾಗಿದೆ.
ಆಹಾರ ಮತ್ತು ಪೊಲೀಸ್ ಇಲಾಖೆಯ ಕೆಲವರಿಗೆ ಪ್ರತಿ ತಿಂಗಳು ಲಕ್ಷಾಂತರ ರೂ. ಮಾಮೂಲು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬ‌ಡಾವಣೆಗಳಲ್ಲಿ ಬಹಿರಂಗವಾಗಿ ಅನ್ನಭಾಗ್ಯದ ಅಕ್ರಮ ನಡೆಯುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವ್ಯವಸ್ಥಿತ ರೀತಿಯಲ್ಲಿ ಕದಿಯಲಾಗುತ್ತಿದೆ. ಒಂದೆಡೆ ಕೆಲ ನ್ಯಾಯಬೆಲೆ ಅಂಗಡಿಯ ಮಾಲೀಕರು ಅಕ್ಕಿಯನ್ನು ಅಕ್ರಮವಾಗಿ ಮಾರಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಬೋಗಸ್ ಪಡಿತರ ಚೀಟಿದಾರರು ಹೆಚ್ಚುವರಿ ಅಕ್ಕಿ ಪಡೆದು ಮಾರಾಟ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಬಡವರಿಗಾಗಿ ಜಾರಿಗೊಳಿಸಿದ ಅನ್ನಭಾಗ್ಯ ಕೆಲ ಅಕ್ರಮದಾರರ ಕನ್ನಭಾಗ್ಯವಾಗಿ ಮಾರ್ಪಟ್ಟಿದೆ. ಈ ಅಕ್ರಮದ ಹಿಂದೆ ಕಾಣದ ಕೈಗಳಿವೆ. ನಗರದಲ್ಲಿ ಪ್ರತಿಷ್ಠಿತರೆಂದು ಗುರುತಿಸಿಕೊಂಡ ವ್ಯಕ್ತಿಗಳು ಜಲಾಲನಗರ ಕಳುವಿನ ಪ್ರಕರಣದ ಹಿಂದಿರುವುದು ತಿಳಿದುಬಂದಿದೆ. ಬಂಧಿತರು ಯಾರ ಸೂಚನೆಯ ಮೇರೆಗೆ ಈ ರೀತಿಯ ಕಳುವು ಖರೀದಿ ಮಾಡಲಾಗುತ್ತದೆ ಎನ್ನುವ ಬಗ್ಗೆಯೂ ಬಹಿರಂಗಪಡಿಸಿದ್ದಾರೆಂದು ಹೇಳಲಾಗಿದೆ.
ಯಾರು ಈ ಅಕ್ರಮದ ಹಿಂದಿನ ಪ್ರಭಾವಿಗಳು ಎನ್ನುವುದು ಈಗ ಬಹಿರಂಗಗೊಳ್ಳಬೇಕಾಗಿದೆ. ಬಂಧಿತನನ್ನು ಮಧು ಎಂದು ಗುರುತಿಸಲಾಗಿದೆ. ಇನ್ನು ಇಬ್ಬರ ಹೆಸರು ಬಹಿರಂಗಗೊಳ್ಳಬೇಕಾಗಿದೆಯ ಮಾರ್ಕೆಟ್‌ಯಾರ್ಡ್‌ನಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕಾರ್ಯ ಕೈಗೊಳ್ಳಲಾಗಿದೆ.

Leave a Comment