ಅನ್ನದಾತ ಪೂರ್ಣಿಮಾ ಟ್ರಸ್ಟ್ ಅಧ್ಯಕ್ಷ ಕೇಶವರೆಡ್ಡಿ

ಕೊರೊನಾ ಲಾಕ್ ಡೌನ್ ಬಾಧಿತರ ಕಷ್ಟಕ್ಕೆ ನೆರವಾದ
ರಾಯಚೂರು.ಏ.06- ಕೊರೊನಾ ಲಾಕ್ ಡೌನ್‌ನಿಂದ ಉಂಟಾದ ಸಂಕಷ್ಟದ ಸ್ಥಿತಿಯಲ್ಲಿ ಪೂರ್ಣಿಮಾ ಟ್ರಸ್ಟಿನ ಅಧ್ಯಕ್ಷರಾದ ಎಸ್. ಎಲ್.ಕೇಶವರೆಡ್ಡಿ ಹಾಗೂ ರೇಖಾ ಕೇಶವರೆಡ್ಡಿ ಅವರು ಅನ್ನದಾತರಾಗಿ ಬಡವರ ಹಸಿವು ತೀರಿಸುವ ಪವಿತ್ರ ಕಾರ್ಯದಲ್ಲಿ ತೊಡಗಿದ್ದಾರೆ.
ಪೂರ್ಣಿಮಾ ಶಿಕ್ಷಣ ಸಂಸ್ಥೆ ಮೂಲಕ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ನಿರ್ವಹಿಸುತ್ತಿರುವ ಅವರು ನಗರದಲ್ಲಿ ಧಾರ್ಮಿಕ ಮತ್ತು ಇನ್ನಿತರ ಯಾವುದೇ ಚಟುವಟಿಕೆಗಳಿಗೆ ಕೊಡುಗೈ ದಾನಿಗಳಾಗಿ ನಿಲ್ಲುವ ಮನಸ್ಥಿತಿ ಹೊಂದಿದವರಾಗಿದ್ದಾರೆ. ಕೊರೊನಾ ಲಾಕ್ ಡೌನ್‌ನಿಂದ ಉಂಟಾದ ಸಂಕಷ್ಟ ಮನವರಿಕೆ ಮಾಡಿಕೊಂಡು ಸ್ವಯಂ ಸ್ಪೂರ್ತಿಯಿಂದ ಹಸಿದ ಹೊಟ್ಟೆಗೆ ತುತ್ತು ನೀಡುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.
ಸ್ವತಃ ಊಟ ಸಿದ್ಧಪಡಿಸುವ ಮೂಲಕ ಬಡವರಿಗೆ ಮತ್ತು ಕೊರೊನಾ ನಿಯಂತ್ರಣದಲ್ಲಿ ತೊಡಗಿದವರಿಗೆ ಗುಣಮಟ್ಟದ ಊಟ ನೀಡುವ ಮೂಲಕ ಅನ್ನದಾಸೋಹ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಪ್ರತಿ ದಿನ 1 ಸಾವಿರಕ್ಕೂ ಅಧಿಕ ಊಟ ಮತ್ತು ಉಪಹಾರ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಕಾರ್ಯ ಮುಂದುವರೆಸಿದ್ದಾರೆ. ಶಿಕ್ಷಣ ಸಂಸ್ಥೆ ನಿರ್ವಹಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮತ್ತು ಗ್ರಾಮಾಂತರ ಪ್ರದೇಶದ ಜನರಿಗೆ ಗುಣಮಟ್ಟದ ಶಿಕ್ಷಣ ನೀಡುವ ಉನ್ನತ ಕಾರ್ಯದೊಂದಿಗೆ ಈಗ ಕೊರೊನಾ ಲಾಕ್ ಡೌನ್ ಬಾಧಿತರಿಗೆ ಅನ್ನ ನೀಡುವ ಮತ್ತೊಂದು ಪುಣ್ಯ ಕಾರ್ಯಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಮಾ.29 ರಿಂದ ಕೊರೊನಾ ಬಾಧಿತರಿಗೆ ನೆರವು ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪ್ರತಿನಿತ್ಯ ಯಾರೇ ಬೇ‌ಡಿಕೆ ಮಂಡಿಸಿದರೂ, ಊಟದ ವ್ಯವಸ್ಥೆಯೊಂದಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯ ನೀಡಲು ಕೇಶವರೆಡ್ಡಿ ಅವರು ಮುಂದಾಗಿದ್ದಾರೆ. ಇವರ ಈ ಸಹಾಯ ಅನೇಕ ಬಡವರಿಗೆ ಅನುಕೂಲವಾಗಿದೆ. ಇವರ ಈ ಕಾರ್ಯವನ್ನು ಕಿಲ್ಲೆಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಸಮಾಜದ ವಿವಿಧ ಮುಖಂಡರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕೇಶವರೆಡ್ಡಿ ಅವರ ಈ ಮಾನವೀಯ ಸೇವೆ ಇನ್ನಿತರರಿಗೆ ಮಾದರಿಯಾಗಿದೆ. ಕೇಶವರೆಡ್ಡಿ ಅವರು ಒಬ್ಬ ಸಾಮಾಜಿಕ ಕಳಕಳಿ ಹೊಂದಿದ ವ್ಯಕ್ತಿಯಾಗಿ ಬೆಳೆದ ಕಾರಣದಿಂದ ನಗರ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಸಂಕಷ್ಟ ಬಂದ ಸಂದರ್ಭದಲ್ಲಿ ಸ್ವಯಂ ಸ್ಪೂರ್ತಿಯೊಂದಿಗೆ ಮುನ್ನುಗ್ಗಿ ತಮ್ಮಿಂದ ಸಾಧ್ಯವಾದ ನೆರವು ನೀಡುವ ಅವರ ವ್ಯಕ್ತಿತ್ವ ಸಮಾಜದಲ್ಲಿ ಅವರಿಗೆ ವಿಶೇಷ ಗೌರವ ಸಲ್ಲುವಂತೆ ಮಾಡಿದೆ.

Leave a Comment