ಅನ್ನದಾತ ಋಣಮುಕ್ತ : ಒಂದೇ ಕಂತಿನಲ್ಲಿ ವಾಣಿಜ್ಯ ಬ್ಯಾಂಕ್ ಬೆಳೆ ಸಾಲ ಪಾವತಿಗೆ ಸಿಎಂ ಆದೇಶ: 7 ಲಕ್ಷ 49 ಸಾವಿರ ರೈತರಿಗೆ ಅನುಕೂಲ

ಬೆಂಗಳೂರು, ಜೂ. ೧೨- ವಾಣಿಜ್ಯ ಬ್ಯಾಂಕ್‌ಗಳ ರೈತರ ಸಾಲಮನ್ನಾಗೆ ಸಂಬಂಧಿಸಿದ ಗೊಂದಲಗಳಿಗೆ ಎಳೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಾಣಿಜ್ಯ ಬ್ಯಾಂಕ್‌ಗಳ ರೈತರ ಬಾಕಿ ಬೆಳೆ ಸಾಲವನ್ನು ಒಂದೇ ಕಂತಿನಲ್ಲಿ ಪಾವತಿ ಮಾಡುವ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.

ರೈತರು ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದಿರುವ ಬೆಳೆಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಅರ್ಹತೆ ಹೊಂದಿರುವ ನಿರ್ಬಂಧಿತ ಸಾಲಗಳು, ಅರ್ಹತೆ ಹೊಂದಿರುವ ಓವರ್ ಡ್ಯೂ ಸಾಲಗಳು ಹಾಗೂ ಪ್ರೋತ್ಸಾಹ ಧನಕ್ಕೆ ಅರ್ಹತೆ ಹೊಂದಿರುವ ಸಾಲಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬಿಡುಗಡೆಯಾದ ಮೊತ್ತವನ್ನು ಕಡಿತಗೊಳಿಸಿ ಉಳಿದ ಸಾಲದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.

ಎನ್‌ಪಿಎ ಸಾಲಗಳು ದಿನಾಂಕ 1-1-2018 ರಿಂದ ಬಡ್ಡಿ ಮೊತ್ತ ಪಾವತಿಸುವ ಬಗ್ಗೆ ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬಾಕಿ ಇರುವ ರೈತರ ಸಾಲವನ್ನು ಈ ಹಿಂದೆ ತೀರ್ಮಾನವಾದಂತೆ ನಾಲ್ಕು ಸಮಾನ ಕಂತುಗಳಲ್ಲಿ ಪಾವತಿಸಲು ಸರ್ಕಾರ ತೀರ್ಮಾನಿಸಿತ್ತು. ಆದರಂತೆ ವಾಣಿಜ್ಯ ಬ್ಯಾಂಕ್‌ಗಳ ಮುಖ್ಯಸ್ಥರ ಜತೆಗೂ ಚರ್ಚೆ ನಡೆಸಿ ಇದುವರೆಗೂ ಸುಮಾರು 3 ಸಾವಿರ ಕೋಟಿಯಷ್ಟು ಸಾಲಮನ್ನಾದ ಹಣವನ್ನು ವಾಣಿಜ್ಯ ಬ್ಯಾಂಕ್‌ಗಳಿಗೆ ಪಾವತಿಸಲಾಗಿತ್ತು. ವಾಣಿಜ್ಯ ಬ್ಯಾಂಕ್‌ಗಳ ಸಾಲ ವರ್ಗೀಕರಣ ನೀತಿಯಿಂದ ರೈತರ ಸಾಲಮನ್ನಾ ತೊಡಕಾಗಿ ರೈತರಿಗೆ ಸಾಲಮನ್ನಾದ ಲಾಭ ಸಿಗದಂತಾಗಿ ಗೊಂದಲಗಳಾಗಿದ್ದವು.

ರಾಜ್ಯಾದ್ಯಂತ ಸುಮಾರು 13 ಸಾವಿರಕ್ಕೂ ಹೆಚ್ಚು ರೈತರು ವಾಣಿಜ್ಯ ಬ್ಯಾಂಕ್‌ಗಳ ಸಾಲ ವರ್ಗೀಕರಣ ನೀತಿಯಿಂದ ಸಾಲಮನ್ನಾದ ಪ್ರಯೋಜನ ಸಿಗದೆ ಕಷ್ಟಕ್ಕೆ ಒಳಗಾಗಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಆಕ್ಷೇಪ ವ್ಯಕ್ತಪಡಿಸಿ, ವಾಣಿಜ್ಯ ಬ್ಯಾಂಕ್‌ಗಳ ಸಾಲ ನೀತಿ ಬಗ್ಗೆ ಅಸಮಾಧಾನ ಹೊರಹಾಕಿ, ಸಾಲ ಮನ್ನಾ ಗೊಂದಲಗಳಿಗೆ ವಾಣಿಜ್ಯ ಬ್ಯಾಂಕ್‌ಗಳೆ ಕಾರಣ ಎಂದು ದೋಷಾರೋಪ ಮಾಡಿದ್ದರು.

ಈ ಎಲ್ಲ ಹಿನ್ನೆಲೆಯಲ್ಲಿ ಇಂದು ವಾಣಿಜ್ಯ ಬ್ಯಾಂಕ್‌ಗಳ ರೈತರ ಸಾಲಮನ್ನಾವನ್ನು ಒಂದೇ ಕಂತಿನಲ್ಲಿ ಪಾವತಿಸಲು ಮಹತ್ತರ ತೀರ್ಮಾನವನ್ನು ಮುಖ್ಯಮಂತ್ರಿ ಕು ಮಾರಸ್ವಾಮಿ ಕೈಗೊಂಡು, ಸಾಲಮನ್ನಾದ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಎಳೆದಿದ್ದಾರೆ.

ಮುಖ್ಯಮಂತ್ರಿಗಳ ಆದೇಶದಂತೆ ವಾಣಿಜ್ಯ ಬ್ಯಾಂಕ್‌ಗಳ ರೈತರ ಸಾಲಮನ್ನಾವನ್ನು ಒಂದೇ ಕಂತಿನಲ್ಲಿ ಪಾವತಿಸುವ ಆದೇಶ ಹೊರಬಿದ್ದಿದೆ.

ಮುಖ್ಯಮಂತ್ರಿಗಳ ಈ ತೀರ್ಮಾನದಿಂದ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಸುಮಾರು 7 ಲಕ್ಷ 49 ಸಾವಿರ ರೈತರು ಋಣಮುಕ್ತವಾಗಲಿದ್ದಾರೆ.
ವಾಣಿಜ್ಯ ಬ್ಯಾಂಕ್‌ಗಳ ರೈತರ ಸಾಲ ಮನ್ನಾ ವಿವರ
ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಒಟ್ಟು ಸಾಲದ ಮೊತ್ತ 7563.27 ಕೋಟಿ ರೂ.ಗಳು. ಈ ಸಾಲದ ಬಡ್ಡಿಯ ಮೇಲಿನ ಮೊತ್ತ 983.94 ಕೋಟಿ ರೂ. ರೈತರ ಸಾಲಮನ್ನಾ ಆಗಬೇಕಾಗಿರುವ ಒಟ್ಟು ಮೊತ್ತ 8547.46 ಕೋಟಿ ರೂ. ಇದರಲ್ಲಿ ರಾಜ್ಯ ಸರ್ಕಾರ 3930.15 ಕೋಟಿ ರೂ.ಗಳ ನ್ನು ರೈತರ ಖಾತೆಗೆ ಜಮಾ ಮಾಡಿದೆ.

ನೋಡಲ್ ಇಲಾಖೆಗಳಿಗೆ ಈಗಾಗಲೇ ಬಿಡುಗಡೆ ಮಾಡಿರುವ ಹಣ 5150 ಕೋಟಿ ರೂ.ಗಳು. ಇದರಲ್ಲಿ ನೋಡಲ್ ಇಲಾಖೆ ಬಳಿ ಸಾಲಮನ್ನಾದ 1219.83 ಕೋಟಿ ಹಣ ಬಾಕಿ ಇದ್ದು, ಈಗ ಸಾಲಮನ್ನಾಗೆ ಒಟ್ಟು ಬೇಕಾಗಿರುವ ಹಣ 3397.48 ಕೋಟಿ ರೂ.ಗಳು. ಈ ಬಾಕಿ ಇರುವ ಹಣವನ್ನು ಸರ್ಕಾರ ಈಗ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿದೆ.

Leave a Comment