ಅನ್ನದಾತನ ಆರ್ತನಾದಕ್ಕೆ ಸರ್ಕಾರ ಕಿವುಡು

ಬೆಂಗಳೂರು, ಮಾ. ೧೦ – ದೇಶದ ಅನೇಕ ಕಡೆ ಬರಗಾಲವಿದೆ; ಕುಡಿಯುವ ನೀರೂ ಇಲ್ಲದೆ ಜನ – ಜಾನುವಾರುಗಳಿಗೆ ಸಮಸ್ಯೆಯಾಗಿದೆ. ಕೆಲವೆಡೆ ಒಳ್ಳೆಯ ಮಳೆಯಾಗಿ ಉತ್ತಮ ಬೆಳೆಯೂ ಬಂದಿದೆ; ದೇಶದ ಕೃಷಿ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಬೆಳವಣಿಗೆಯಾಗಿದೆ ಎಂಬ ವರದಿಗಳೇ ಈಗ ಸಂಶಯಕ್ಕೆಡೆ ಮಾಡಿಕೊಡುತ್ತಿವೆ.

ಶಿರಾದಲ್ಲಿ ಒಂದೇ ರೈತ ಕುಟುಂಬದ ಮೂವರ ಹೃದಯವಿದ್ರಾವಕ ಸಾವು ಸಂಭವಿಸಿದ್ದು, ಪ್ರತಿ ದಿನವೂ ರಾಜ್ಯದ, ಅಷ್ಟೇ ಏಕೆ ದೇಶದ ವಿವಿಧ ಭಾಗಗಳಿಂದ ರೈತರ ಆತ್ಮಹತ್ಯೆ ವಾಸ್ತವದ ಪರಿಸ್ಥಿತಿಯನ್ನು ತೆರೆದು ತೋರಿಸುತ್ತಿದೆ. ರೈತರ ಬಗ್ಗೆ ನಮ್ಮ ಸರ್ಕಾರದ ನಿಷ್ಕಾಳಜಿಯ ದ್ಯೋತಕವಾಗಿ ಈ ಎಲ್ಲಾ ಆತ್ಮಹತ್ಯೆಗಳು ನಮ್ಮ ಎದುರಿಗೆ ಭೂತಗಳಾಗಿ ಕುಣಿಯುತ್ತಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳ ಬಗ್ಗೆ ನಿಷ್ಕಾಳಜಿ ತೋರುತ್ತಿವೆ. ಅವರ ಸಮಸ್ಯೆಗಳನ್ನು ಅರಿಯುವ ಅವನ್ನು ಪರಿಹರಿಸುವ ಯಾವ ಪ್ರಯತ್ನವನ್ನೂ ಮಾಡದೆ ತಮಗೇನು ಆಗಿಯೇ ಇಲ್ಲವೆಂಬಂತಹ ಆಶಾಢಭೂತಿ ಧೋರಣೆಯನ್ನು ಆಡಳಿತ ನಡೆಸುವವರು ತೋರುತ್ತಿರುವುದು ಅವರ ದಿವ್ಯ ನಿರ್ಲಕ್ಷ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಮಹಾರಾಷ್ಟ್ರದ ಬರಗಾಲ ಪ್ರದೇಶವಾದ ಮರಾಠವಾಡದಲ್ಲಿ ಈ ವರ್ಷದ ಮೊದಲೆರಡು ತಿಂಗಳಲ್ಲಿ ಗರಿಷ್ಠ ಸಂಖ್ಯೆಯ 117 ರೈತರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದರೂ ಇಂತಹ ದಾರುಣ ಪರಿಸ್ಥಿತಿಯನ್ನು ರೈತರು ಎದುರಿಸಬೇಕಾಗಿರುವುದು ಆಘಾತಕಾರಿ ವಿಚಾರ.

ಅಲ್ಲಿನ ಸರ್ಕಾರ ರೈತರ ಬಿಕ್ಕಟ್ಟನ್ನು ಪರಿಹರಿಸಲಾಗಿದೆ ಎಂದು ಹೇಳಿಕೊಂಡರೂ ಈ ಆತ್ಮಹತ್ಯೆಗಳು ಮುಂದುವರೆಯಲು ಅವರ ಸಮಸ್ಯೆ ಪರಿಹಾರವಾಗದಿರುವುದೇ ಕಾರಣ ಎನ್ನಲಾಗಿದೆ. ಈ ಪೈಕಿ ಕೇವಲ 46 ರೈತರ ಕುಟುಂಬಗಳಿಗೆ ಮಾತ್ರ ಪರಿಹಾರವನ್ನು ಕೊಡಲಾಗಿದ್ದು, ಉಳಿದವು ಇನ್ನೂ ಇತ್ಯರ್ಥವಾಗಬೇಕಾಗಿದೆ.

ಸರ್ಕಾರ ತಾನು ಏನೇನೋ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿಕೊಂಡಿದ್ದರೂ ಅದರಿಂದ ಯಾವುದೇ ಫಲಿತಾಂಶ ದೊರೆತಿಲ್ಲ. ಬದಲಿಗೆ ಅವೆಲ್ಲಾ ಕೇವಲ ಬೋಗಸ್ ಘೋಷಣೆಯಾಗಿಯೇ ಉಳಿದಿವೆ.

ಪರಿಹಾರದ ಪ್ರಯತ್ನಗಳು ಕಣ್ಣಿಗೆ ಗೋಚರಿಸುತ್ತಲೇ ಇಲ್ಲ. ಸರ್ಕಾರದ ಕಾರ್ಯತಂತ್ರ ಅವಾಸ್ತವಿಕವಾಗಿದ್ದು, ಅದರ ಧೋರಣೆಯಲ್ಲಿ ಆಮೂಲಾಗ್ರ ಬದಲಾವಣೆಯಾಗದ ಹೊರತು ಯಾವುದೇ ಪ್ರಯೋಜನವಾಗದು ಎಂಬುದು ಅಧಿಕಾರಿಗಳಿಗೆ ಗೊತ್ತಿದ್ದರೂ ಅವರು ಮೂಕರಂತಿದ್ದಾರೆ. ಏಕೆಂದರೆ ರಾಜಕಾರಣಿಗಳು ಹೇಳಿದ್ದನ್ನು ಮಾಡಿದ್ದೇವೆಂದು ಪೇಪರ್ ಮೇಲೆ ತೋರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಭ್ರಷ್ಟಾಚಾರದಲ್ಲಿ ಹಣ ಸಂಪಾದಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.

ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ನೀಡಬೇಕೆಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ, ಅದನ್ನು ಜಾರಿಗೆ ತರುವ ಧೈರ್ಯ ಮಾತ್ರ ಯಾವುದೇ ನಾಯಕನಿಗೆ, ಪಕ್ಷಕ್ಕೆ ಅಥವಾ ಸರ್ಕಾರ ಇಲ್ಲದೇ ಇರುವುದು ಒಟ್ಟು ಸಮಸ್ಯೆಯ ದುರಂತವಾಗಿದೆ. ರೈತರ ಬೆಂಬಲಕ್ಕೆ ಧಾವಿಸುತ್ತೇವೆ ಎಂದು ಹೇಳುತ್ತಲೇ ಸರ್ಕಾರಗಳು ನಿಧಾನಿಸುತ್ತಿವೆ.

ರೈತರಿಗೆ ಸರ್ಕಾರಗಳು ಯಾವ ಸಬ್ಸಿಡಿ ಕೊಡದೇ ಇದ್ದರೂ ನಡೆದೀತು; ಆದರೆ ಲಾಭದಾಯಕ ಬೆಲೆಯೊಂದನ್ನು ಕೊಟ್ಟರೆ ಅವರು ಸರ್ಕಾರಕ್ಕೇ ತಮ್ಮ ಪಾಲಿನ ತೆರಿಗೆಗಳನ್ನು ಕಟ್ಟಲು ಸಶಕ್ತರಾಗುತ್ತಾರೆಂದು ತಜ್ಞರು ಪದೇ ಪದೇ ಹೇಳುತ್ತಿದ್ದಾರಾದರೂ ಬೆಂಕಿಗೆ ಗಂಟೆ ಕಟ್ಟಲು ಯಾರಿಗೂ ಧೈರ್ಯವಿಲ್ಲ ಎಂದರೆ ಈ ಸರ್ಕಾರಗಳೆಲ್ಲವೂ ವರ್ತಕರ ಲಾಬಿಯ ಹಿಡಿತದಲ್ಲೇ ಬಿದ್ದು ಒದ್ದಾಡುತ್ತಿವೆ.

ರೈತರಿಗೆ, ರೈತರ ಮಕ್ಕಳಿಗೆ, ಹೆಂಡತಿಗೆ, ತಂದೆ-ತಾಯಿಯಂದಿರಿಗೆ ಸರ್ಕಾರ ಯಾವ ಸಹಾಯವನ್ನೂ ನೀಡಬೇಕಾಗಿಲ್ಲ, ಬದಲಿಗೆ ಅವರಿಗೆ ಒದಗಿಸುವ ಎಲ್ಲಾ ಸೌಲಭ್ಯಗಳಿಗೆ ಶುಲ್ಕ ಪಡೆಯಲೂ ಸಾಧ್ಯ – ಆದರೆ ಅವರಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದ ನಂತರ ಮಾತ್ರ ಇದು ಸಾಧ್ಯ.

ಕಳೆದ ವರ್ಷ ಈರುಳ್ಳಿ ಕ್ವಿಂಟಾಲಿಗೆ 460 ರೂ.ಗೆ ಮಾರಾಟವಾಯಿತು. ಅದರ ಉತ್ಪಾದನಾ ವೆಚ್ಚ 950 ರೂ., ತೊಗರಿಬೇಳೆಗೂ ಅದೇ ಪರಿಸ್ಥಿತಿ ಬಂದೊದಗಿತು. ಸರ್ಕಾರ 5050 ರೂ. ನಿಗದಿ ಮಾಡಿದರೆ ವ್ಯಾಪಾರಿಗಳು 4200ಕ್ಕೆ ಕೊಂಡರು. ರಾಜ್ಯದಲ್ಲಿ ಕೊಬ್ಬರಿ ಬಳೆಗಾರರ ಪರಿಸ್ಥಿತಿಯೂ ಹೀಗೇ ಇದ್ದು, ಕನಿಷ್ಠ ಉತ್ಪಾದನಾ ವೆಚ್ಚ 10 ಸಾವಿರ ಇದ್ದರೆ ಅದರ ಮಾರಾಟದ ಬೆಲೆ 6 ಸಾವಿರ ಮಾತ್ರ.

ಇದರಿಂದ ರೈತ ಬದುಕುವುದು ಹೇಗೆ ಸಾಧ್ಯ? ಅವನಿಗೆ ಸಾವೇ ಗತಿ ಅಲ್ಲವೇ.

ಮಹಾರಾಷ್ಟ್ರವೊಂದರಲ್ಲೇ ಕಳೆದ ವರ್ಷ 3052 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲೂ ಈ ಸಾವಿನ ಸಂಖ್ಯೆ ಇದೇ ಪ್ರಮಾಣದಲ್ಲಿದೆ.

ಆದ್ದರಿಂದ ರೈತರ ಆತ್ಮಹತ್ಯೆಗಳು ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತದೆ, ಪರಿಹಾರ ಸಾಧ್ಯವೂ ಇಲ್ಲ ಅದು ಯಾರಿಗೂ ಬೇಕಾಗಿಯೂ ಇಲ್ಲ.

 

Leave a Comment