ಅನುಮತಿ ಪಡೆದರೂ ಪತಾಕೆ-ಬಂಟಿಂಗ್ಸ್ ತೆರವು

ನಗರಸಭೆ ವಿರುದ್ಧ ಜನಾಕ್ರೋಶ
ಪುತ್ತೂರು, ಏ.೧೬- ಪುತ್ತೂರಿನ ಮಹಾಲಿಂಗೇಶ್ವರ ದೇವರ ಜಾತ್ರೆಯ ಪ್ರಯುಕ್ತ ಏಳ್ಮುಡಿಯಿಂದ ಕಲ್ಲಾರೆ ರಾಘವೇಂದ್ರ ಮಠದವರೆಗಿನ ರಸ್ತೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆದುಕೊಂಡು ಅಳವಡಿಸಲಾಗಿದ್ದ ಪತಾಕೆ ಹಾಗೂ ಬಂಟಿಂಗ್ಸ್‌ನ್ನು ನಗರಸಭೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತೆರವುಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಲ್ಲಾರೆಯ ಓಂಕಾರ ಯುವಕ ವೃಂದದ ಅಧ್ಯಕ್ಷ ಮನೋಹರ್ ಕಲ್ಲಾರೆ ಅವರು ಕಲ್ಲಾರೆ ರಾಘವೇಂದ್ರ ಮಠದ ಕಾರ್ಯಕ್ರಮ ಹಾಗೂ ಮಹಾಲಿಂಗೇಶ್ವರ ದೇವರ ಜಾತ್ರಾ ವಿಶೇಷ ಪೇಟೆ ಸವಾರಿ ಸಂದರ್ಭದಲ್ಲಿ ಪತಾಕೆ ಹಾಗೂ ಬಂಟಿಂಗ್ಸ್‌ನ್ನು ಅಳವಡಿಸಲು ರೂ. ೩೧೬೫ ಪಾವತಿಸಿ ಅನುಮತಿ ಕೋರಿ ಅರ್ಜಿ ಇತ್ತೀಚೆಗೆ ಪುತ್ತೂರು ನಗರಸಭೆ ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ, ಉಪವಿಭಾಗಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ಅವರು ಸಾರ್ವಜನಿಕರ ಧಾರ್ಮಿಕ ಭಾವನೆ ಪರಿಗಣಿಸಿ ಎ.೫ರಿಂದ ಎ.೧೮ರವರೆಗೆ ಪತಾಕೆ ಹಾಗೂ ಬಂಟಿಂಗ್ಸ್ ಅಳವಡಿಸಲು ಷರತ್ತುಬದ್ದ ವಿಶೇಷ ಅನುಮತಿ ನೀಡಿದ್ದರು. ಆದರೆ ಎ.೧೪ರಂದು ನಗರಸಭಾ ಆಯುಕ್ತೆ ರೂಪಾ ಶೆಟ್ಟಿ ಹಾಗೂ ಅಧಿಕಾರಿ ವರ್ಗದವರು ಏಕಾಏಕಿ ಈ ಪತಾಕೆ ಹಾಗೂ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಿದ್ದಾರೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ದೇವರ ಮೊರೆ: ದೇವಳದಲ್ಲಿ ಪ್ರಾರ್ಥನೆ
ಹಿಂದೂಗಳ ಧಾರ್ಮಿಕ ಭಾವನೆಗೆಗೆ ಧಕ್ಕೆ ತರುವಂತೆ ಪತಾಕೆ ಹಾಗೂ ಬಂಟಿಂಗ್ಸ್‌ಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ಹಿಂದೂ ಮುಖಂಡರು ಹಾಗೂ ಓಂಕಾರ ಯುವಕ ವೃಂದದ ಸದಸ್ಯರು ಪುತ್ತೂರು ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅನುಮತಿ ಪಡೆದು ಅಳವಡಿಸಲಾಗಿರುವ ಪತಾಕೆ ಹಾಗೂ ಬಂಟಿಂಗ್ಸ್‌ಗಳನ್ನು ನಗರಸಭೆ ಅಧ್ಯಕ್ಷರ ಒತ್ತಡಕ್ಕೆ ಮಣಿದು ತೆರವುಗೊಳಿಸಿದರುವ ಸಾಧ್ಯತೆಯಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಎಲ್ಲರಿಗೂ ಸದ್ಬುದ್ದಿ ನೀಡಲಿ ಎಂದು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿಕೊಳ್ಳಲಾಗಿದೆ ಎಂದು ಓಂಕಾರ ಯುವಕ ವೃಂದದ ಅಧ್ಯಕ್ಷ ಮನೋಹರ್ ಕಲ್ಲಾರೆ ಅವರು ತಿಳಿಸಿದ್ದಾರೆ.
‘ಒತ್ತಡದಿಂದ ಮಾಡಿದ ಕೆಲಸ ಅಲ್ಲ’
ಚುನಾವಣೆ ನೀತಿ ಸಂಹಿತೆಯ ಅನುಗುಣವಾಗಿ ಹಾಗೂ ನಗರಸಭೆ ಕೈಗೊಂಡ ನಿರ್ಧಾರದಂತೆ ಏಳ್ಮುಡಿಯಿಂದ ಕಲ್ಲಾರೆ ರಾಘವೇಂದ್ರ ಮಠದವರೆಗಿನ ರಸ್ತೆಯಲ್ಲಿ ಓಂಕಾರ ಯುವಕ ವೃಂದದಿಂದ ಅಳವಡಿಸಲಾಗಿರುವ ಪತಾಕೆ ಹಾಗೂ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಇದು ಯಾರದೋ ಒತ್ತಡದಿಂದ ಮಾಡಿದ ಕೆಲಸವಲ್ಲ, ಚುನಾವಣೆ ನೀತಿ ಸಂಹಿತೆಯ ಅನುಗುಣವಾಗಿ ನಡೆದ ಕರ್ತವ್ಯ ಎಂದು ಪುತ್ತೂರು ನಗರಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Leave a Comment