ಅನಿವಾಸಿ ಕನ್ನಡಿಗರು ಬಂಡವಾಳ ಹೂಡಲು ಮನವಿ

ಬೆಂಗಳೂರು, ಸೆ. ೧೧- ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ಉದ್ಯಮಿಗಳು ಕರ್ನಾಟಕ ರಾಜ್ಯದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಲು ಕರ್ನಾಟಕ ವಾಣಿಜ್ಯ ಕೈಗಾರಿಕಾ ಮಹಾ ಸಂಸ್ಥೆ(ಎಫ್‌ಕೆ‌ಸಿಸಿಐ) ಮುಕ್ತ ಆಹ್ವಾನ ನೀಡಿದೆ.
ರೂವಾಂಡ, ಊಗಾಂಡ, ನ್ಯೂಯಾರ್ಕ್, ಅಬುದಾಬಿ, ಶಾರ್ಜ್, ದುಬೈ ದೇಶಗಳು ಸೇರಿದಂತೆ ವಿವಿಧ ಕಡೆ ನೆಲೆಸಿರುವ ಅನಿವಾಸಿ ಕನ್ನಡಿಗರ ಉದ್ಯಮಿಗಳ ಜೊತೆ ಸಭೆ ನಡೆಸಿದ್ದು, ಅವರು ಬಂಡವಾಳ ಹೂಡುವಂತೆ ಮನವೊಲಿಸಲಾಗಿದೆಯೆಂದು ಪತ್ರಿಕಾಗೋಷ್ಠಿಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್.ಎಸ್. ಶೆಟ್ಟಿ ಅವರು ತಿಳಿಸಿದರು.
ಕರ್ನಾಟಕದಲ್ಲಿ ಅನಿವಾಸಿ ಭಾರತೀಯರ ನೆರವಿನೊಂದಿಗೆ ಜಂಟಿ ಹೂಡಿಕೆ ಯೋಜನೆ ಆರಂಭ ರೋಗಗ್ರಸ್ಥವಾಗಿರುವ ಉದ್ಯಮಿಗಳ ಪುನಶ್ಚೇತನಕ್ಕೆ ಹಣಕಾಸು ದೊರಕಿಸುವುದು ಅಲ್ಲದೆ ಉದ್ಯಮಿಗಳ ಸ್ಥಾಪನೆಗೆ ಈಕ್ವಿಟಿ ಫಂಡ್ ನೆರವು ನೀಡುವಂತೆ ಅವರಲ್ಲಿ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಉದ್ಯಮಿಗಳನ್ನು ಆರಂಭಿಸಿದಲ್ಲಿ ಭೂಮಿ ಹಂಚಿಕೆ ಹಣಕಾಸು ಸಂಸ್ಥೆಗಳಿಂದ ಸಾಲ ಒಳಗೊಂಡಂತೆ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡುವುದಾಗಿ ಅನಿವಾಸಿ ಭಾರತೀಯ ಉದ್ಯಮಿಗಳಿಗೆ ಭರವಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ದಲ್ಲಾಸ್ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, 2 ರಾಜ್ಯಗಳ ವ್ಯವಹಾರ ಅಭಿವೃದ್ಧಿಗೆ ಒಡಂಬಡಿಕೆ ಪತ್ರವನ್ನು ವಿನಿಮಯ ಮಾ‌ಡಿಕೊಳ್ಳಲಾಯಿತು ಎಂದು ತಿಳಿಸಿದರು.
ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ ಎಫ್‌ಕೆಸಿಸಿಐ ಪದಾಧಿಕಾರಿಗಳು ಎಲ್ಲಾ ಅನಿವಾಸಿ ಕನ್ನಡಿಗ ಭಾರತೀಯರೊಡನೆ ಸಭೆ ನಡೆಸಿ ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಎಫ್‌ಕೆಸಿಸಿಐ ನಡೆಸುತ್ತಿರುವ ಏಷ್ಯನ್ ಶೃಂಗಸಭೆಗೆ ಸಹಾಯ ಮಾಡುವುದರ ಜೊತೆಗೆ ಕರ್ನಾಟಕ ಉದ್ಯಮಿ ವರ್ತಕ ಕ್ಷೇತ್ರದ ಅಭಿವೃದ್ಧಿಗಾಗಿ ಉತ್ತೇಜನ ನೀಡುವುದಾಗಿ ಕನ್ನಡಿಗರಾದ ಆರ್. ಎನ್. ಶೆಟ್ಟಿಯವರು ಭರವಸೆ ನೀ‌ಡಿದ್ದಾರೆ ಎಂದು ತಿಳಿಸಿದರು.
ಭಾರತ ಬಂದ್‌ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ ಎಸ್. ಶೆಟ್ಟಿಯವರು ಬಂದ್ ಮಾಡುವುದರಿಂದಲೇ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸಿ.ಆರ್. ಜನಾರ್ಧನ್ ಮತ್ತು ಉಪಾಧ್ಯಕ್ಷ ಪೆರಿಕಲ್ ಸುಂದರ್ ಅವರು ಉಪಸ್ಥಿತರಿದ್ದರು.

Leave a Comment