ಅನಿಲ ಸೋರಿಕೆ: ಸಮಗ್ರ ತನಿಖೆಗೆ ಎಸ್ಪಿ ಆದೇಶ

ಉಡುಪಿ, ಆ.೧೩- ಸೋಮವಾರ ಬೆಳಗ್ಗೆ ೬:೩೦ರ ಸುಮಾರಿಗೆ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದಲ್ಲಿರುವ ಮಲ್ಪೆ ಫ್ರಶ್ ಮರೈನ್ ಎಕ್ಸ್‌ಫೋರ್ಟ್ ಮೀನು ಸಂಸ್ಕರಣ ಘಟಕದ ಕೆಲವು ಸಿಲಿಂಡರ್‌ಗಳಲ್ಲಿ ಅಮೋನಿಯ ಅನಿಲ ಸೋರಿಕೆಯಿಂದ ಅಲ್ಲಿ ೭೫ ಮಂದಿ ಕಾರ್ಮಿಕರು ಅಸ್ವಸ್ಥ ಗೊಂಡ ಘಟನೆಯ ಕುರಿತಂತೆ ಸಮಗ್ರ ತನಿಖೆ ನಡೆಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ. ಅನಿಲ ಸೋರಿಕೆ ಘಟನೆಯಿಂದ ೬೮ನ ಮಹಿಳಾ ಹಾಗೂ ಏಳು ಮಂದಿ ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಇವರೆಲ್ಲರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಓರ್ವ ಕಾರ್ಮಿಕ ಮಹಿಳೆ ತೀವ್ರ ನಿಗಾ ಘಟಕದಲ್ಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರೊಂದಿಗೆ ಇಂದು ಘಟನೆ ಸಂಭವಿಸಿದ ಫಿಶ್‌ಮಿಲ್ ಹಾಗೂ ಕಾರ್ಮಿಕರು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ಅವರು ಪರಿಸ್ಥಿತಿಯನ್ನು ಅವಲೋಕಿಸಿ ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ತನಿಖೆಗಾಗಿ ಕುಂದಾಪುರದ ಸಹಾಯಕ ಕಮಿಷನರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸಹ ಅವರು ನೇಮಿಸಿದ್ದಾರೆ. ಸಮಿತಿಯಲ್ಲಿ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಉಡುಪಿ ಜಿಲ್ಲೆ ಪರಿಸರ ಮಾಲಿನ್ಯ ನಿಯಂತ್ರಮ ಮಂಡಳಿಯ ಪರಿಸರ ಅಧಿಕಾರಿ, ಜಿಲ್ಲಾ ಆರೋಗ್ಯ ಇಲಾಖೆಯ ಡಿಎಚ್‌ಓ ಅವರು ಸದಸ್ಯರಾಗಿ ರುವರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಗ್ನಿಶಾಮಕ ಇಲಾಖೆಯಿಂದ ಅನಿಲ ಸೋರಿಕೆ ತಡೆಯಲು ಕ್ರಮ ಕೈಗೊಳ್ಳ ಲಾಗಿದ್ದು, ಅಗ್ನಿ ಶಾಮಕ ಇಲಾಖೆಯ ಅಧಿಕಾರಿಯಾದ ವಸಂತಕುಮಾರ್ ಅವರು ಅಪಾಯವನ್ನು ಲೆಕ್ಕಿಸದೇ ಪೈಪ್‌ಲೈನ್‌ಗಳ ವಾಲ್ವ್‌ಗಳನ್ನು ಮುಚ್ಚಿದ್ದು, ಈ ಮೂಲಕ ಸ್ಪೋಟ ಉಂಟಾಗುವುದನ್ನು ತಪ್ಪಿಸಿದ್ದಾರೆ ಎಂದವರು ಹೇಳಿದ್ದಾರೆ.

Leave a Comment