ಅನಿರೀಕ್ಷಿತಗಳ ಗೋಪುರ ಮಾಸ್ತಿ ಗುಡಿ

ಚಿತ್ರ : ಮಾಸ್ತಿ ಗುಡಿ
ನಿರ್ಮಾಪಕರು : ಸುಂದರ್ ಗೌಡ, ಅನಿಲ್ ಕುಮಾರ್
ನಿರ್ದೇಶನ : ನಾಗಶೇಖರ್
ತಾರಾಬಳಗ : ದುನಿಯಾ ವಿಜಯ್, ಅಮೂಲ್ಯ, ಕೃತಿ ಕರಬಂಧ, ರಂಗಾಯಣ ರಘು, ಬಿ. ಜಯಶ್ರೀ ಮುಂತಾದವರು.

‘ಮಾಸ್ತಿ ಗುಡಿ’ ಚಿತ್ರ ನೋಡುವ ಪ್ರೇಕ್ಷಕರು ಖಳನಟರಾದ ಅನಿಲ್ ಮತ್ತು ಉದಯ್ ಹೆಲಿಕಾಪ್ಟರ್‌ನಿಂದ ತಳ್ಳಲ್ಪಟ್ಟಾಗ ಹೋ ಎಂದು ಕೂಗುತ್ತಾರೆ. ಅವರಿಬ್ಬರ ನಟನೆ ಮತ್ತು ದೇಹದಾರ್ಢ್ಯಕ್ಕೂ ಸಿಳ್ಳೆ, ಚಪ್ಪಾಳೆಯಿಂದ ಪ್ರತಿಕ್ರಿಯಿಸುತ್ತಾರೆ. ಅಷ್ಟರಮಟ್ಟಿಗೆ ಅನುಕಂಪ ಗಿಟ್ಟಿಸುತ್ತದೆ ಚಿತ್ರ.
‘ಮಾಸ್ತಿಗುಡಿ’ ಚಿತ್ರದಲ್ಲಿ ಅನೇಕ ಬೆಚ್ಚಬೀಳಿಸುವ ಮತ್ತು ಅಚ್ಚರಿಯ ಕಥಾ ತಿರುವುಗಳು ಎದುರಾಗುತ್ತವೆ. ದೇವರ ಅತಿಶಯ ಶಕ್ತಿ, ಮಾಟ, ಮಂತ್ರ, ದೆವ್ವ, ದುರಂತದ ಜೀವನ, ಸಾಹಸ, ಪ್ರೇಮ ಕಥೆ ಇವುಗಳೆಲ್ಲವೂ ದುನಿಯ ವಿಜಯ್ ಚಿತ್ರಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ‘ಮಾಸ್ತಿಗುಡಿ’ಯಲ್ಲಿ ವಿಶೇಷವಾಗಿ ಸೇರಿರುವ ವಿಚಾರವೆಂದರೆ ಹುಲಿಯ ಸಂರಕ್ಷಣೆ ಆ ಮೂಲಕ ಪ್ರಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವುದಾಗಿದೆ. ಒಬ್ಬ ಮಾವುತನ ಮಗನಾಗಿ, ಅದರಲ್ಲೂ ಮಾಸ್ತಿ ಅಮ್ಮನ್ನನ್ನು ಮತ್ತು ಕಾಡನ್ನೇ ನಂಬಿದ ಜನರ ನಡುವಿನ ನಾಯಕ ಮಾಸ್ತಿ, ಹುಲಿಯನ್ನೇ ತಾನಿರುವೆಡೆಗೆ ಕರೆಯುವ ಮತ್ತು ಹಿಂದಿರುಗುವಂತೆ ಮಾಡಬಲ್ಲವನಾಗಿರುತ್ತಾನೆ. ಅವನ ಜೀವನವೇ ಹುಲಿ ಮತ್ತು ಕಾಡಿನ ರಕ್ಷಣೆಗೆ ಮುಡಿಪಾಗುತ್ತದೆ.
ನಾಯಕನ ಕಣ್ಣೆದುರೇ ಪ್ರೀತಿಸುವ ಹುಡುಗಿಯ ಚಿಕ್ಕಪ್ಪನಿಂದಲೇ ಮರ್‍ಯಾದ ಹತ್ಯೆ ನಡೆದುಹೋಗುತ್ತದೆ. ಆ ಹುಡುಗಿಯ ಪಾತ್ರಧಾರಿಯಾಗಿರುವ ಅಮೂಲ್ಯ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಭಿನ್ನವಾಗಿ ನಟಿಸಿದ್ದಾರೆ. ದೆವ್ವವಾಗಿ ಅದರಲ್ಲೂ ಮಾಸ್ತಿಯನ್ನು ಮತ್ತು ಕಾಡನ್ನು ಕಾಪಾಡುವ ಒಳ್ಳೆಯ ದೆವ್ವವಾಗಿಯೂ ಕಾಣಸಿಕೊಂಡಿರುವುದು ನೆನಪಿನಲ್ಲಿ ಉಳಿಯುತ್ತದೆ. ಮತ್ತೊಬ್ಬ ನಾಯಕಿ ಕೃತಿ ಕರಬಂಧಗೆ ಬಹಳ ದಿನಗಳ ಮೇಲೆ ಸಿಕ್ಕಿರುವ ಒಳ್ಳೆ ಅವಕಾಶವನ್ನು ಗಟ್ಟಿಯಾಗಿ ಬಳಸಿಕೊಂಡಿದ್ದಾರೆ. ನಟನೆಗೆ ಅವರ ಪಾತ್ರದಲ್ಲಿ ಸಾಕಷು ಅವಕಾಶವಿದೆ. ತಾವೇ ಕಥೆ ಮಾಡಿರುವುದರಿಂದ ದುನಿಯಾ ವಿಜಯ್ ಯುವಕನಿಂದ ಮುದುಕನವರೆಗೆ ಅನೇಕ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ, ರಂಗಾಯಣ ರಘು, ರವಿಶಂಕರ್, ಬಿ. ಜಯಶ್ರೀ ಪಾತ್ರಗಳನ್ನು ಕಟ್ಟಿಕೊಟ್ಟಿರುವ ರೀತಿ ಊಹಿಸಲು ಕಷ್ಟವಾಗುತ್ತದೆ.
ಸಿನೆಮಾ ಹೀಗೆ ಸಾಗುತ್ತೆ ಎಂದು ಕಲ್ಪಿಸಿಕೊಳ್ಳಲು ಆಗದಂತೆ ‘ಮಾಸ್ತಿ ಗುಡಿ’ಯ ಕಥೆಯನ್ನು ಕಟ್ಟಲಾಗಿದೆ. ಇದನ್ನು ತಿಳಿಯಲು ಮತ್ತು ಹುಲಿಯ ಜೊತೆಗೆ ಚಿತ್ರದಲ್ಲಿರುವ ಗ್ರಾಫಿಕ್ಸ್‌ಗಾಗಿ ‘ಮಾಸ್ತಿ ಗುಡಿ’ಯನ್ನು ನೋಡಬೇಕಾಗುತ್ತದೆ. ನಿರ್ದೇಶಕ ನಾಗಶೇಖರ್ ಚಿತ್ರ ಎನ್ನುವುದಕ್ಕಿಂತ ಇದೊಂದು ಪಕ್ಕಾ ದುನಿಯಾ ವಿಜಯ್ ಸಿನೆಮಾ. ಸಾಧುಕೋಕಿಲ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣ ಕಾಡಿನ ಕಥೆಗೆ ಹಾಗು ನಿರೂಪಿತವಾಗಿರುವ ಮೂಢ ನಂಬಿಕೆಯಾದರೂ ಸತ್ಯವಾಗಿ ಬಿಂಬಿಸುವ ದೃಶ್ಯಗಳಿಗೆ ಘಾಡತೆ ಕೊಟ್ಟಿವೆ. ವಿಶೇಷವಾಗಿ ಹಾಡಿನಲ್ಲಿ ಚಿತ್ರಿತವಾಗಿರುವ ಕಾನನದ ಹಸಿರ ಸಿರಿ ಮುದ ಕೊಡುತ್ತದೆ. ಅನಿಲ್ ಮತ್ತು ಉದಯ್ ಸಾವಿಗೀಡಾದ ದೃಶ್ಯವನ್ನೇ ಚಿತ್ರೀಕರಿಸದೆ ಚಿತ್ರವನ್ನು ಪೂರ್ಣಗೊಳಿಸಬಹುದಿತ್ತು ಎನ್ನುವ ವಿಷಾದವೂ ಕಾಡುತ್ತದೆ.
ದುನಿಯಾ ವಿಜಯ್ ಅನೆ ಮೇಲೆ ಕುಳಿತು ಹಾಡಿರುವ ಗೀತೆ, ಮಾಸ್ತಿಯನ್ನು ಮಾಮ ಎನ್ನುವ ಪುಟ್ಟಹುಡುಗಿಯ ದುರಂತ ಸಾವು ‘ಗಂಧದಗುಡಿ’ ಚಿತ್ರದಿಂದ ಸ್ಫೂರ್ತಿ ಪಡೆದಿರುವುದೆನಿಸುತ್ತದೆ. ‘ಜಯಸಿಂಹ’ರಾಗಿ ವಿಷ್ಣುವರ್ಧನ್ ನೆನಪನ್ನೂ ಮೂಡಿಸಲಾಗುತ್ತದೆ. ಚಿತ್ರದಲ್ಲಿ ದುರಂತಗಳಿವೆ, ಕೊಲೆಗಳ ಕ್ರೌರ್ಯವಿದೆ, ಮಾಸ್ತಮ್ಮನ ಕುರಿತ ಅತಿಶಯದ ನಂಬಿಕೆಗಳಿವೆ, ದೆವ್ವ ನಿಜವಾಗಿಯೂ ಇರುವಂಥೆ ತೋರಿಸಿದರೂ ನಿಗೂಢವೂ ಕೊನೆಯಲ್ಲಿ ಕಾಡುತ್ತದೆ. ಚಿತ್ರದ ಕೊನೆಯಲ್ಲಿ ಇನ್ನೇನು ಹೇಳುವುದಕ್ಕೆ ಇಲ್ಲ ಎನಿಸುವಾಗಲೇ ‘ಮಾಸ್ತಿಗುಡಿ-೨’ ಚಿತ್ರ ಮಾಡುವ ಸೂಚನೆಯನ್ನು ಚಿತ್ರತಂಡ ಕೊಟ್ಟಿದೆ.
-ಕೆ.ಬಿ. ಪಂಕಜ

Leave a Comment