ಅನಾರೋಗ್ಯ ಹಿನ್ನೆಲೆ ಆಸನದಲ್ಲಿಯೇ ಕುಳಿತು ಪ್ರಮಾಣ ವಚನ ಸ್ವೀಕರಿಸಿದ ಮುಲಾಯಮ್ ಸಿಂಗ್ ಯಾದವ್

ನವದೆಹಲಿ, ಜೂ 18 -ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಮ್  ಸಿಂಗ್ ಯಾದವ್, ಲೋಕಸಭೆಯಲ್ಲಿ

ತಮ್ಮ ಆಸನದಲ್ಲಿಯೇ ಕುಳಿತು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸೋಮವಾರದಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ಎರಡನೇ ದಿನವಾದ ಮಂಗಳವಾರ , ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ  ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಉತ್ತರ ಪ್ರದೇಶದಿಂದ ಲೋಕಸಭೆಗೆ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸರದಿ ಸಂದರ್ಭದಲ್ಲಿ  ಲೋಕಸಭೆಯ ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಮಾತನಾಡಿ, ಲೋಕಸಭೆಯ ಹಿರಿಯ ಸದಸ್ಯರಾಗಿರುವ ಮುಲಾಯಮ್ ಸಿಂಗ್ ಯಾದವ್ ಅವರ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಅವರು ತಮ್ಮ ಆಸನದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದರು.

ಪುತ್ರ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಹಾಯದಿಂದ ವ್ಹೀಲ್ ಚೇರ್ ನಲ್ಲಿ ಸದನಕ್ಕೆ ಆಗಮಿಸಿದ ಮುಲಾಯಮ್ ಸಿಂಗ್ ಯಾದವ್, ಸದನದ ಪ್ರವೇಶ ದ್ವಾರದ ಸಮೀಪದ ಸಾಲಿನಲ್ಲಿ ಆಸೀನರಾದರು. ಮುಲಾಯಮ್ ಸಿಂಗ್ ಯಾದವ್ ಅವರು ತಾವು ಕುಳಿತಿರುವ ಸ್ಥಳದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಲು ಲೋಕಸಭೆ ಪೀಠ ಅನುಮತಿ ನೀಡುತ್ತಿದ್ದಂತೆಯೇ ಸದನದ ಸಿಬ್ಬಂದಿ ಯಾದವ್ ಅವರ ಬಳಿಗೆ ಹೋಗಿ ಔಪಚಾರಿಕ ಪ್ರಕ್ರಿಯೆಗಳನ್ನು ಮುಗಿಸಿ ಅವರಿಂದ ಹಸ್ತಾಕ್ಷರ ಪಡೆದರು.

ಮುಲಾಯಮ್ ಸಿಂಗ್ ಯಾದವ್ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ನಡೆದ ಉತ್ತರಖಾಂಡ ರಾಜ್ಯದ ಸದಸ್ಯರ ಪ್ರಮಾಣ ವಚನ ಸಂದರ್ಭದಲ್ಲಿ ಮಾಲಾರಾಜ್ಯ ಲಕ್ಷ್ಮೀ ಮಾತ್ರ ಸದನದಲ್ಲಿ ಹಾಜರಿದ್ದು, ಅಜಯ್ ಟಮಟಾ, ತೀರ್ಥಸಿಂಹ ರಾವತ್ ಹಾಗೂ ಅಜಯ್ ಭಟ್ಟ್ ಅವರು ಗೈರಾಗಿದ್ದರು. ನಿಶಂಕ್ ಈ ಮೊದಲೇ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಬಳಿಕ ಯಾದವ್ ಅವರ ಹೆಸರನ್ನು ಸದನದಲ್ಲಿ ಕರೆಯಲಾಯಿತು.

ರೇವತಿ ತ್ರಿಪುರಾ ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಆಡಳಿತರೂಢ

ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು. ಕಾರ್ತಿ ಚಿದಂಬರಂ ಹಾಗೂ ಮಾಲಾ ರಾಜ್ಯಲಕ್ಷ್ಮೀ

ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ ಭಾನುವಾರ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಅವರನ್ನು ಲಕ್ನೋದ ಡಾ.ರಾಮ್ ಮನೋಹರ್ ಲೋಹಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ದಾಖಲು ಮಾಡಲಾಗಿತ್ತು. ಸಿಹಿಮೂತ್ರ ರೋಗ ಹಾಗೂ ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಇಂದು ಸದನಕ್ಕೆ ಹಾಜರಾಗಿ, ಪ್ರಮಾಣ ವಚನ ಸ್ವೀಕರಿಸಿದರು.

ತಮಿಳುನಾಡಿನ ಕಾಂಗ್ರೆಸ್ ಸದಸ್ಯ ಕಾರ್ತಿ ಚಿದಂಬರಂ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಕಾರ್ತಿ ಚಿದಂಬರಂ ತಂದೆ ಚಿದಂಬರಂ ಸಂತೋಷವಾಗಿ ಕಂಡುಬಂದರು. ಈ ಸಂದರ್ಭದಲ್ಲಿ ಸದಸ್ಯ ರಾಜಾ ಅವರು  ಹಿರಿಯ ಸದಸ್ಯ ಚಿದಂಬರಂ ಅವರನ್ನು ಅಭಿನಂದಿಸಿದರು.

ಕಾಂಗ್ರೆಸ್ ಸದಸ್ಯ ಶಶಿ ತರೂರ್ ನೀಲಿ ಬಣ್ಣದ ಪೋಷಾಕಿನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ರವಿಶಂಕರ್ ಪ್ರಸಾದ್ ಹಾಗೂ ರಾಜನಾಥ್ ಸಿಂಗ್ ಸೇರಿದಂತೆ ಕೆಲ ಬಿಜೆಪಿ ಸದಸ್ಯರು ಅವರ ಕೈಕುಲುಕಿದರು.

ಇಂದು ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರಲ್ಲಿ ರಾಜವರ್ಧನ್ ರಾಥೋಡ್ , ಸನ್ನಿ ಡಿಯೋಲ್,ಮನೀಶ್ ತಿವಾರಿ, ಎಂ.ಕಣಿಮೋಜಿ, ದಯಾನಿಧಿ ಮಾರನ್ ಹಾಗೂ ಎಐಎಂಐಎಂನ ಅಸಾದುದ್ದೀನ್ ಓವೈಸಿ ಸೇರಿದ್ದಾರೆ.

ಹೈದರಾಬಾದ್ ಸದಸ್ಯ ಅಸಾದುದ್ದೀನ್ ಓವೈಸಿ ಪ್ರಮಾಣವಚನ ಸ್ವೀಕರಿಸಲು ಮುಂದಾದಾಗ, ಬಿಜೆಪಿ ಸದಸ್ಯರ  ‘ಭಾರತ್ ಮಾತಾ ಕೀ ಜೈ’ ‘ವಂದೇ ಮಾತರಂ’ಘೋಷಣೆಗೆ ಮುಗುಳುನಕ್ಕ ಅಸಾದುದ್ದೀನ್ ಓವೈಸಿ, ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ‘ ಜೈ ಭೀಮ್’  ‘ಅಲ್ಲಾಹೋ ಅಕ್ಬರ್’

ಜೈ ಹಿಂದ್ ‘ ಎಂದು ತಮ್ಮ ಪ್ರಮಾಣ ವಚನ ಕೊನೆಗೊಳಿಸಿದರು. ತಮಿಳು ನಾಡಿನ ಸದಸ್ಯರು ‘ತಮಿಳುನಾಡು ಹಾಗೂ ಪೆರಿಯಾರ್ ಚಳವಳಿ’ ಯನ್ನು ಶ್ಲಾಘಿಸುವ ಮೂಲಕ ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು.

 ಈ ಸಂದರ್ಭವನ್ನು ಕಡತದಿಂದ ತೆಗೆದುಹಾಕುವಂತೆ ಪೀಠ ಆದೇಶಿಸಿತು.   ತೆಲಂಗಾಣ ರಾಜ್ಯದ ಕಾಂಗ್ರೆಸ್ ಸಂಸದ ಆರ್.ರೆಡ್ಡಿ, ಮೊಬೈಲ್‍ ನಲ್ಲಿ ಓದುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು. ಹಸಿರು ಮತ್ತು ಕೆಂಪು ಬಣ್ಣದ ಪಾರಂಪರಿಕ ಪೋಷಾಕಿನಲ್ಲಿ ಕಂಗೊಳಿಸಿದ ತ್ರಿಪುರಾದ ಬಿಜೆಪಿ ಸದಸ್ಯೆ ರೇವತಿ ತ್ರಿಪುರಾ ಅವರು ಕಷ್ಟಪಟ್ಟು ಹಿಂದಿಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು. ರೇವತಿ ಅವರ ಪ್ರಯತ್ನಕ್ಕೆ ಬಿಜೆಪಿ ಸದಸ್ಯರು ಹರ್ಷೋದ್ಘರಿಸಿದರು.

ರಾಜಸ್ಥಾನ, ಸಿಕ್ಕಿಂ, ಪಂಜಾಬ್, ತಮಿಳುನಾಡು, ತೆಲಂಗಾಣ ಹಾಗೂ ಇತರೆ ರಾಜ್ಯದ ಸದಸ್ಯರು ಅಧಿವೇಶನದ ಎರಡನೇ ದಿನವಾದ ಮಂಗಳವಾರದಂದು ಪ್ರಮಾಣ ವಚನ ಸ್ವೀಕರಿಸಿದರು. ಅಧಿವೇಶನದ ಮೊದಲ ದಿನ ಪ್ರಧಾನ ಮಂತ್ರಿ ಹಾಗೂ ಸದನದ ನಾಯಕ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ,  ಕೇಂದ್ರ ಸಚಿವರು ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದ್ದರು.

Leave a Comment